ನವದೆಹಲಿ: ಫುಟ್ಬಾಲ್ ಪಂದ್ಯಗಳಲ್ಲಿ ಹಲವು ಆಟಗಾರರಿಗೆ ಕೆಂಪು, ಹಳದಿ ಕಾರ್ಡ್ಗಳನ್ನು ನೀಡುವುದು ಸಾಮಾನ್ಯ. ಆದರೆ ಇದೀಗ ಕ್ರಿಕೆಟ್ ಪಂದ್ಯವೊಂದು ಕೂಡ ಅನುಚಿತ ವರ್ತನೆಗಾಗಿ ಹಲವು ಆಟಗಾರರಿಗೆ ದಂಡ ಶಿಕ್ಷೆ ವಿಧಿಸಿದ ಘಟನೆಗೆ ಸಾಕ್ಷಿ ಆಗಿದೆ. ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಟಿ20 ಟೂರ್ನಿಯಲ್ಲಿ ದಕ್ಷಿಣ ದೆಹಲಿ ಸೂಪರ್ಸ್ಟಾರ್ಸ್ ಮತ್ತು ಪಶ್ಚಿಮ ದೆಹಲಿ ಲಯನ್ಸ್ ತಂಡಗಳ ಒಟ್ಟು 5 ಆಟಗಾರರು ದಂಡ ಶಿಕ್ಷೆಗೆ ಗುರಿಯಾಗಿದ್ದಾರೆ.
ದೆಹಲಿ ಲಯನ್ಸ್ ನಾಯಕ ನಿತೀಶ್ ರಾಣಾ ಪಂದ್ಯದಲ್ಲಿ ಶತಕ ಸಿಡಿಸಿದರು ಮತ್ತು ಇದೇ ವೇಳೆ ಎದುರಾಳಿ ತಂಡದಲ್ಲಿದ್ದ ಐಪಿಎಲ್ ತಾರೆ ದಿಗ್ವೇಶ್ ರಾಥಿ ಜತೆಗೆ ವಾಗ್ವಾದ ನಡೆಸಿದರು. ಇದಕ್ಕಾಗಿ ನಿತೀಶ್ ರಾಣಾಗೆ ಪಂದ್ಯ ಸಂಭಾವನೆಯ ಶೇ. 50 ಮತ್ತು ದಿಗ್ವೇಶ್ ರಾಥಿಗೆ ಶೇ. 80 ದಂಡ ವಿಧಿಸಲಾಗಿದೆ. ಜತೆಗೆ ಎದುರಾಳಿಯನ್ನು ನಿಂದಿಸಿದ ದೆಹಲಿ ಲಯನ್ಸ್ನ ಕ್ರಿಶ್ ಯಾದವ್ಗೆ ಶೇ. 100, ದೆಹಲಿ ಸೂಪರ್ಸ್ಟಾರ್ಸ್ನ ಅಮನ್ ಭಾರತಿಗೆ ಶೇ. 30, ಸುಮಿತ್ ಮಾಥುರ್ಗೆ ಶೇ. 50 ದಂಡ ವಿಧಿಸಲಾಗಿದೆ.