ಪುಣೆ: ಕೌಶಲಯುತ ಆಟ ಪ್ರದರ್ಶಿಸಿದ ಪಟನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿಯು ಮುಂಬಾ ತಂಡದ ಸವಾಲನ್ನು ಮೆಟ್ಟಿನಿಂತಿತು. ಇದರೊಂದಿಗೆ ನಾಲ್ಕನೇ ತಂಡವಾಗಿ ಸೆಮಿಫೈನಲ್ಸ್‌ಗೆ ಲಗ್ಗೆ ಹಾಕಿತು. ಇದಕ್ಕೂ ಮುನ್ನ ಹರಿಯಾಣ ಸ್ಟೀಲರ್ಸ್, ದಬಾಂಗ್ ದಿಲ್ಲಿ ಮತ್ತು ಯು.ಪಿ. ಯೋಧಾಸ್ ತಂಡಗಳು ನಾಲ್ಕರ ಘಟ್ಟ ತಲುಪಿದ್ದವು.
ಬಾಳೇವಾಡಿ ಕ್ರೀಡಾ ಸಂಕೀರ್ಣದಲ್ಲಿಗುರುವಾರ ನಡೆದ 2ನೇ ಎಲಿಮಿನೇಟರ್ ಹಣಾಹಣಿಯ ಉಭಯ ಅವಧಿಯಗಳಲ್ಲಿಮಿಂಚಿನ ಆಟ ತೋರಿದ ಮೂರು ಬಾರಿಯ ಚಾಂಪಿಯನ್ಸ್ ಪಟನಾ ಪೈರೇಟ್ಸ್ ತಂಡವು 8 ಅಂಕಗಳ ಅಂತರದಿಂದ ಮುಂಬಾ ತಂಡದ ಹೋರಾಟವನ್ನು ಕೊನೆಗೊಳಿಸಿತು. ಈ ಜಯದೊಂದಿಗೆ ಡಿಸೆಂಬರ್ 27ರಂದು ನಡೆಯಲಿರುವ ದಬಾಂಗ್ ದಿಲ್ಲಿ ವಿರುದ್ದ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ದಪಡಿಸಿಕೊಂಡಿತು. ಮೊದಲ ಸೆಮಿಫೈನಲ್ ಪಂದ್ಯದಲ್ಲಿಹರಿಯಾಣ ಸ್ಟೀಲರ್ಸ್ ಮತ್ತು ಯು.ಪಿ. ಯೋಧಾಸ್ ತಂಡಗಳು ಪೈಪೋಟಿ ನಡೆಸಲಿವೆ. ಡಿಸೆಂಬರ್ 29ರಂದು ಫೈನಲ್ ಜರುಗಲಿದೆ.
ಪಟನಾ ಪೈರೇಟ್ಸ್ ತಂಡದ ಪರ ಎಡ ಬದಿಯ ರೇಡರ್ ಅಮನ್ ಹತ್ತು ಅಂಕಗಳನ್ನು ಕಲೆಹಾಕುವ ಮೂಲಕ ಗೆಲುವಿನಲ್ಲಿನಿರ್ಣಾಯಕ ಪಾತ್ರವಹಿಸಿದರು. ಇವರಲ್ಲದೆ, ದೇವಾಂಕ್ ಮತ್ತು ಆಲ್‌ರೌಂಡರ್ ಗುರ್‌ದೀಪ್ ಅನುಕ್ರಮವಾಗಿ 6 ಮತ್ತು 5 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿನಿರ್ಣಾಯಕ ಪಾತ್ರವಹಿಸಿದರು. ಅತ್ತ ಉಭಯ ಅವಧಿಗಳಲ್ಲಿಕೆಚ್ಚೆದೆಯ ಪ್ರದರ್ಶನ ನೀಡಲ ವಿಫಲಗೊಂಡ ಮುಂಬಾ ತಂಡದ ಪರ ಅಮಿರ್ ಮೊಹಮ್ಮದ್ 6 ಅಂಕಗಳನ್ನು ಗಳಿಸಿದರೆ, ಅಜಿತ್ ಚೌಹಾಣ್ 5 ಅಂಕಗಳ ಕಾಣಿಕೆ ನೀಡಿದರು.
ದ್ವಿತೀಯ ಅವಧಿಯಲ್ಲಿಮುಂಬಾ ತಂಡ ಪ್ರಬಲ ತಿರುಗೇಟು ನೀಡಿದರೂ ಮೊದಲಾರ್ಧದ ಹಿನ್ನಡೆ ತಂಡವನ್ನು ಬಾಧಿಸಿತು. ಮುಂಬಾ ತಂಡವು ರೇಡಿಂಗ್‌ನಲ್ಲಿಮಿಂಚಿದರೂ ಟ್ಯಾಕಲ್‌ನಲ್ಲಿಎಡವಿತು. ಅತ್ತ ಪಟನಾ ತಂಡವು ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿಕ್ರಮವಾಗಿ 5 ಮತ್ತು 7 ಅಂಕ ಗಳಿಸಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದು, ತಂಡದ ನೆರವಿಗೆ ಬಂದಿತು. ಮೊದಲ ಅವಧಿಯಲ್ಲಿಲಭಿಸಿದ ಮುನ್ನಡೆಯಿಂದ ಪಟನಾ ಪೈರೇಟ್ಸ್ ಆತ್ಮವಿಶ್ವಾಸದಲ್ಲಿದ್ವಿತೀಯಾರ್ಧ ಆರಂಭಿಸಿತು. ಆದರೆ ಹಿನ್ನಡೆಗೆ ಗುರಿಯಾಗಿದ್ದ ಮುಂಬಾ ಒತ್ತಡದೊಂದಿಗೆ ದ್ವಿತೀಯಾರ್ಧ ಆರಂಭಿಸಿತು.
ಇದಕ್ಕೂ ಮುನ್ನ ಆಲ್‌ರೌಂಡ್ ಪ್ರದರ್ಶನ ತೋರಿದ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ತಂಡ ಪಂದ್ಯದ ಮೊದಲಾರ್ಧಕ್ಕೆ 17-11ಅಂಕಗಳಿಂದ ಹಿಡಿತ ಸಾಧಿಸಿತು. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿದ ಪಟನಾ ತಂಡಕ್ಕೆ ಸ್ಟಾರ್ ರೇಡರ್ ದೇವಾಂಕ್, ಗುರ್‌ದೀಪ್ ಮತ್ತು ಅಯಾನ್ ಸಾಥ್ ನೀಡಿದರು. ಈ ಮೂವರ ರೇಡಿಂಗ್ ಫಲವಾಗಿ ಪೈರೇಟ್ಸ್ ತಂಡ ಪಂದ್ಯ ಆರಂಭವಾದ ಎಂಟೇ ನಿಮಿಷಗಳಲ್ಲಿಯು ಮುಂಬಾ ತಂಡವನ್ನು ಮೊದಲ ಬಾರಿ ಆಲೌಟ್ ಮಾಡಿತು. ಮುಂಬಾ ತಂಡದ ಅಮಿರ್‌ಮೊಹಮ್ಮದ್ ಅವರನ್ನು ಅದ್ಭುತವಾಗಿ ಟ್ಯಾಕಲ್ ಮಾಡಿದ ಗುರ್‌ದೀಪ್ ಪೈರೇಟ್ಸ್‌ಗೆ ಆಲೌಟ್ ಪಾಯಿಂಟ್ಸ್ ತಂದರು. ಇದರಿಂದ ಆತ್ಮವಿಶ್ವಾಸ ವೃದ್ಧಿಸಿಕೊಂಡ ಪೈರೇಟ್ಸ್ ಉಳಿದ ಅವಧಿಯಲ್ಲಿಪಾರಮ್ಯ ಸಾಧಿಸಿತು.
ವಿರಾಮದ ಅಂತ್ಯದ ವೇಳೆಗೆ ಹಿನ್ನೆಡ ತಗ್ಗಿಸಲು ಮಾಜಿ ಚಾಂಪಿಯನ್ ಮುಂಬಾ ಶತಪ್ರಯತ್ನ ನಡೆಸಿತು. ಆದರೆ ಯಾವೊಬ್ಬ ಆಟಗಾರನು ಮಿಂಚಿಲಲಿಲ್ಲ. ಇದರ ನಡುವೆಯೂ ಅಜಿತ್ ಚೌಹಾಣ್, ಲೋಕೇಶ್ ಮತ್ತು ಆಮಿರ್ ಹೋರಾಟ ತೋರಿದರಾದರೂ ಪಟನಾ ತಂಡವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ.