ನವದೆಹಲಿ: ಕ್ಯಾನ್ಸರ್ನಿಂದ ಬಳಲುತ್ತಿರುವ ಅಂಶುಮಾನ್ ಗಾಯಕ್ವಾಡ್ಗೆ ಆರ್ಥಿಕ ನೆರವು ನೀಡುವುದಾಗಿ ಟೀಮ್ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಘೋಷಿಸಿದ್ದಾರೆ. ಕ್ಯಾನ್ಸರ್ಗೆ ತುತ್ತಾಗಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಶುಮಾನ್ ಚಿಕಿತ್ಸೆಗಾಗಿ ಸಹಾಯಹಸ್ತವನ್ನು ಎದುರು ನೋಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್, ಕ್ರಿಕೆಟ್ ಮಂಡಳಿಯ ನಡೆಯಿಂದ ತಾವು ಬೇಸರಗೊಂಡಿದ್ದು, ಖಿನ್ನತೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.
ಅಂಶುಮಾನ್ ಚಿಕಿತ್ಸೆಗೆ ನೆರವಾಗುವಂತೆ ನಾನು ಹಲವು ದಿನಗಳಿಂದ ಬಿಸಿಸಿಐಗೆ ಒತ್ತಾಯಿಸುತ್ತಿದ್ದೇನೆ. ಇದರ ಹೊರತಾಗಿಯೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಇದು ದುಃಖಕರ ವಿಷಯವಾಗಿದ್ದು, ನಾನು ಖಿನ್ನತೆಗೆ ಒಳಗಾಗಿದ್ದೇನೆ. ನಾನು ಅಂಶುಮಾನ್ ಜೊತೆ ಕೆಲವು ಪಂದ್ಯಗಳಲ್ಲಿ ಆಡಿದ್ದೇನೆ. ಆತನನ್ನು ಈ ಸ್ಥಿತಿಯಲ್ಲಿ ನೋಡಲು ಆಗುತ್ತಿಲ್ಲ. ಯಾರೂ ಸಹ ತೊಂದರೆ ಅನುಭವಿಸಬಾರದು ಎಂಬುದು ನನ್ನ ಭಾವನೆ. ಅವರ ಚಿಕಿತ್ಸೆಗೆ ನೆರವಾಗುವಂತೆ ಬಿಸಿಸಿಐಗೆ ಮನವಿ ಮಾಡಿದ್ದೇನೆ.
ಇದನ್ನೂ ಓದಿ: ಅತಿಯಾದ ಆತ್ಮವಿಶ್ವಾಸವೇ ಕೆಲಸ ಕೆಡಲು ಕಾರಣವಾಯಿತು; ಭಾರತ ವಿರುದ್ಧದ ಸೋಲಿಗೆ ಪಾಕ್ ಮಾಜಿ ನಾಯಕನ ಹೇಳಿಕೆ ವೈರಲ್
ಅಂಶುಮಾನ್ ಚಿಕಿತ್ಸೆಗಾಗಿ ನಾನು ನನ್ನ ಪಿಂಚಣಿ ಹಣ ನೀಡಲು ಸಿದ್ದನಿದ್ದೇನೆ. ಅಂಶುಗೆ ಸಹಾಯ ಮಾಡಲು ನಿಮ್ಮ ಹೃದಯದಿಂದ ಅನಿಸಬೇಕು. ಈಗ ನಾವು ಅವನ ಪರವಾಗಿ ನಿಲ್ಲುವ ಸಮಯ. ನಮ್ಮ ಕ್ರಿಕೆಟ್ ಅಭಿಮಾನಿಗಳು ಅವರನ್ನು ಕೈ ಬಿಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಅವರ ಚೇತರಿಕೆಗಾಗಿ ನಾವೆಲ್ಲರೂ ಪ್ರಾರ್ಥಿಸಬೇಕಿದೆ ಎಂದು 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರು ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಅಂಶುಮಾನ್ ಅವರ ಗೆಳೆಯ ಸಂದೀಪ್ ಪಾಟೀಲ್ ತಿಳಿಸಿದ್ದರು. ಭಾರತ ತಂಡ ಟಿ20 ವಿಶ್ವಕಪ್ ಗೆದ್ದಾಗ ಬಿಸಿಸಿಐ ಬಹುಮಾನವನ್ನು ಘೋಷಿಸಿತ್ತು. ಈ ವೇಳೆ ಅಭಿಮಾನಿಗಳು ಅಂಶುಮಾನ್ ಅವರ ಚಿಕಿತ್ಸೆಗೆ ನೆರವು ನೀಡುವಂತೆ ಕೋರಿದ್ದರು. ಈ ಮನವಿ ಮಾಡಿ ವಾರಗಳೇ ಕಳೆದರೂ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.