ಕ್ರೀಡೆ

ಬುಮ್ರಾ-ಬೌಲ್ಟ್ ದಾಳಿಗೆ ತತ್ತರಿಸಿದ ಲಖನೌ: ಐಪಿಎಲ್‌ನಲ್ಲಿ ವಿಶಿಷ್ಠ ದಾಖಲೆ ಬರೆದ ಮುಂಬೈ ಇಂಡಿಯನ್ಸ್

ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ 5ನೇ ಪಂದ್ಯಕ್ಕೆ ಗೆಲುವಿನ ಓಟ ವಿಸ್ತರಿಸಿ, ಐಪಿಎಲ್ 18ನೇ ಆವೃತ್ತಿಯಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದೆ. ವಿಕೆಟ್ ಕೀಪರ್-ಬ್ಯಾಟರ್ ರ‌್ಯಾನ್ ರಿಕೆಲ್‌ಟನ್ (58 ರನ್, 32 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಸೂರ್ಯಕುಮಾರ್ (54 ರನ್, 28 ಎಸೆತ, 4 ಬೌಂಡರಿ, 4 ಸಿಕ್ಸರ್) ಅವಳಿ ಅರ್ಧಶತಕಗಳ ಜತೆಗೆ ವೇಗಿ ಜಸ್‌ಪ್ರೀತ್ ಬುಮ್ರಾ (22ಕ್ಕೆ 4) ಮಾರಕ ದಾಳಿಯ ನೆರವಿನಿಂದ ಹಾರ್ದಿಕ್ ಪಾಂಡ್ಯ ಪಡೆ ಲಖನೌ ಸೂಪರ್ ಜೈಂಟ್ಸ್ ಎದುರು 54 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ರಿಕೆಲ್‌ಟನ್-ಸೂರ್ಯಕುಮಾರ್ ಆಸರೆಯಲ್ಲಿ 7 ವಿಕೆಟ್‌ಗೆ 215 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 103 ರನ್‌ಗಳಿಸಿದ ಲಖನೌ ಸೂಪರ್ ಜೈಂಟ್ಸ್ ಸುಸ್ಥಿತಿಯಲ್ಲಿತ್ತು.ನಂತರ ಜಸ್‌ಪ್ರೀತ್ ಬುಮ್ರಾ ಸಹಿತ ಇತರ ಬೌಲರ್‌ಗಳ ಸಂಘಟಿತ ದಾಳಿಗೆ ನಿರಂತರ ವಿಕೆಟ್ ಕಳೆದುಕೊಂಡು ಭರ್ತಿ 20 ಓವರ್‌ಗಳಲ್ಲಿ 161 ರನ್‌ಗಳಿಗೆ ಸರ್ವಪತನ ಕಂಡಿತು. ಟೂರ್ನಿಯಲ್ಲಿ 5 ಸೋಲು ಕಂಡ ರಿಷಭ್ ಪಂತ್ ಪಡೆ 6ನೇ ಸ್ಥಾನದಲ್ಲಿ ಉಳಿಯಿತು.

150. ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ 150 ಪಂದ್ಯ ಗೆದ್ದ ಮೊದಲ ತಂಡ. ಸಿಎಸ್‌ಕೆ (140), ಕೆಕೆಆರ್ (133) ನಂತರದಲ್ಲಿವೆ.

7. ಮುಂಬೈ ತಂಡ ಸತತ 5 ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಗೆದ್ದ 7ನೇ ಸೀಸನ್ ಇದಾಗಿದ್ದು, ಇದರಲ್ಲಿ 4 ಚಾಂಪಿಯನ್ ಹಾಗೂ ಒಮ್ಮೆ ರನ್ನರ್ ಅಪ್ ಆಗಿದೆ.

172. ಜಸ್‌ಪ್ರೀತ್ ಬುಮ್ರಾ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿದರು. ಲಸಿತ್ ಮಾಲಿಂಗ್ (170) ನಂತರದಲ್ಲಿದ್ದಾರೆ.

10. ಸೂರ್ಯ ಕುಮಾರ್ ಐಪಿಎಲ್‌ನ ಗರಿಷ್ಠ ಪಂದ್ಯಗಳಲ್ಲಿ ಸತತವಾಗಿ 25 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಸಿದ ರಾಬಿನ್ ಉತ್ತಪ್ಪ (10) ದಾಖಲೆ ಸರಿಗಟ್ಟಿದರು.