ನವದೆಹಲಿ: ವಿಶ್ವ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ನಡುವೆ ಚೆಂಡಿಗೆ ಎಂಜಲು, ಬೆವರು ಹಚ್ಚುವುದನ್ನು ಆಸ್ಟ್ರೇಲಿಯಾದಲ್ಲಿ ಸಂಪೂರ್ಣ ವಾಗಿ ನಿರ್ಬಂಧಿಸಲಾಗಿದೆ. ಕೋವಿಡ್-19 ಭೀತಿ ಮರೆಯಾದ ಬಳಿಕ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸುವ ಬಗ್ಗೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಕ್ರೀಡಾ ಸಂಸ್ಥೆ ಎಐಎಸ್ನ ವೈದ್ಯಕೀಯ ಸಮಿತಿ ಕೆಲ ಮಾರ್ಗಸೂಚಿಗಳನ್ನು ಸಲ್ಲಿಸಿದೆ. ಅದರಲ್ಲಿ ಈ ಸೂಚನೆಯೂ ಒಳಗೊಂಡಿದೆ.
ಆಸೀಸ್ನಲ್ಲಿ ಕ್ರೀಡಾ ಚಟುವಟಿಕೆ ಪುನರಾರಂಭಕ್ಕೆ 3 ಹಂತಗಳ (ಲೆವೆಲ್ ಎ, ಬಿ, ಸಿ) ಯೋಜನೆ ರೂಪಿಸಲಾಗಿದೆ. ಅದರಂತೆ ಈಗ ‘ಲೆವೆಲ್ ಎ’ಯಲ್ಲಿ ಕ್ರೀಡಾ ಚಟುವಟಿಕೆಗೆ ಸಂಪೂರ್ಣ ನಿರ್ಬಂಧವಿದೆ. ಮುಂದಿನ ಒಂದು ವಾರದಲ್ಲಿ ಲೆವೆಲ್ ಬಿ ಬರಲಿದ್ದು, ಆಗ ಕ್ರೀಡಾಪಟುಗಳ ಅಭ್ಯಾಸಕ್ಕೆ ಷರತ್ತುಬದ್ಧ ಅವಕಾಶ ಲಭಿಸಲಿದೆ. ನಂತರ ಲೆವೆಲ್ ಸಿ ಬಂದಾಗ ಎಲ್ಲ ಕ್ರೀಡಾಸ್ಪರ್ಧೆಗಳು ಆರಂಭಗೊಳ್ಳಲಿವೆ. -ಪಿಟಿಐ