ಮೈಸೂರು: ದಿನದ ಆರಂಭದಲ್ಲಿ ಬೌಲಿಂಗ್‌ಗೆ ನೆರವಾಗುತ್ತಿದ್ದ ಪಿಚ್ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದ ಕರ್ನಾಟಕ ತಂಡದ ಬೌಲರ್‌ಗಳು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ತಿಣುಕಾಡಿದ್ದಾರೆ.
ಪರಿಣಾಮ ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ಭಾನುವಾರ ಆರಂಭಗೊಂಡ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ (23 ವಯೋಮಿತಿಯೊಳಗಿನವರ ಕ್ರಿಕೆಟ್) ಹೈದರಾಬಾದ್ ತಂಡದ ವಿರುದ್ಧ ಮೊದಲ ದಿನ ಹಿನ್ನಡೆ ಅನುಭವಿಸಿದೆ.
ಮೊದಲ ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಇಲ್ಯಾನ್ ಸತಾನಿ(94* ರನ್, 136 ಎಸೆತ, 11 ಬೌಂಡರಿ, 4 ಸಿಕ್ಸರ್ ) ಹಾಗೂ ಸಿಟಿಎಲ್ ರಕ್ಷನ್ (36* ರನ್, 182 ಎಸೆತ, 4 ಬೌಂಡರಿ) ಜೋಡಿಯ ಅಜೇಯ ಶತಕದ ಜತೆಯಾಟದ ನೆರವಿನಿಂದ ಪಂದ್ಯದ ಮೊದಲ ದಿನದಾಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 81 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 223 ರನ್ ಪೇರಿಸಿದೆ. ಆ ಮೂಲಕ ದೊಡ್ಡ ಮೊತ್ತದ ಮುನ್ಸೂಚನೆಯನ್ನು ಪ್ರವಾಸಿ ತಂಡ ನೀಡಿದೆ.
ಹೈದರಾಬಾದ್ ತಂಡ 80 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜತೆಯಾದ ಇಲ್ಯಾನ್ ಸತಾನಿ ಹಾಗೂ ಸಿಟಿಎಲ್ ರಕ್ಷನ್ 7ನೇ ವಿಕೆಟ್‌ಗೆ ಅಜೇಯ 143 ದಾಖಲಿಸಿ ತಂಡಕ್ಕೆ ಚೇತರಿಕೆ ನೀಡಿತು. ಕರ್ನಾಟಕದ ಎಲ್.ಮನ್ವಂತ್‌ಕುಮಾರ್ 3, ಕೆ.ಶಶಿಕುಮಾರ್ 2 ಹಾಗೂ ಯಶೋವರ್ಧನ್ ಪರಾಂತಪ್ 1 ವಿಕೆಟ್ ಪಡೆದರು.