ಇಂದೋರ್: ನವೆಂಬರ್ 24-25ರಂದು ನಡೆದ ಐಪಿಎಲ್ (IPL) ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರು ಸೇರಿದಂತೆ ಒಟ್ಟು 182 ಮಂದಿ ಆಟಗಾರರು ತಂಡಗಳಿಗೆ ಮಾರಾಟವಾಗಿದ್ದು, 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದ್ದು, ಒಟ್ಟು 8 ಆರ್ಟಿಮ್ ಬಳಕೆ ಮಾಡಲಾಗಿದೆ. ಅದರಂತೆ ಈ ಬಾರಿಯ ಟೂರ್ನಿಯಲ್ಲಿ ಫ್ರಾಂಚೈಸಿಗಳು ಅನುಭವಿ ಜತೆಗೆ ಹೊಸ ಮುಖಗಳಿಗೂ ಮಣೆ ಹಾಕಿದ್ದು, ಅನೇಕ ಆಟಗಾರರು ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಇದರಲ್ಲಿ ಪ್ರಮುಖವಾಗಿ ಗುಜರಾತ್ ಮೂಲದ ಯುವ ಬ್ಯಾಟರ್ ಉರ್ವಿಲ್ ಪಟೇಲ್ ಕೂಡ ಒಬ್ಬರಾಗಿದ್ದಾರೆ.
ಈಚೆಗೆ ಮುಕ್ತಾಯಗೊಂಡ ಐಪಿಎಲ್ (IPL) ಮೆಗಾ ಹರಾಜಿನಲ್ಲಿ ಗುಜರಾತ್ ಮೂಲದ ಯುವ ಬ್ಯಾಟರ್ ಉರ್ವಿಲ್ ಪಟೇಲ್ರನ್ನು ಖರೀದಿಸಲು ಯಾವ ಫ್ರಾಂಚೈಸಿಯು ಮುಂದೆ ಬಂದಿರಲಿಲ್ಲ. ಇದೀಗ ಈ ಯುವ ಬ್ಯಾಟರ್ ದೇಶೀಯ ಕ್ರಿಕೆಟ್ನಲ್ಲಿ ತನ್ನ ಸಿಡಿಲಬ್ಬರದ ಬ್ಯಾಟಿಂಗ್ನಿಂದಾಗಿ ಎಲ್ಲರ ಗಮನ ಸೆಳೆಯುತ್ತಿದ್ದು, ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.
ಇಂದೋರ್ನ ಎಮೆರಾಲ್ಡ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಉತ್ತರಾಖಂಡದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಗುಜರಾತ್ ಪರ ಕಣಕ್ಕಿಳಿದಿದ್ದ ಉರ್ವಿಲ್ ಪಟೇಲ್ 36 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಇದಕ್ಕೂ ಮುನ್ನ ತ್ರಿಪುರಾದ ವಿರುದ್ಧ ಇದೇ ಕ್ರೀಡಾಂಗಣದಲ್ಲಿ 28 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಭಾರತದ ಪರ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಬಾರಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆ ಉರ್ವಿಲ್ ಪಾಲಾಯಿತು. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಈ ಸಾಧನೆ ಮಾಡಿದ್ಧಾರೆ.
ಇದೀಗ ಡೇವಿಡ್ ಮಿಲ್ಲರ್ ಹೆಸರಿನಲ್ಲಿದ್ದ ಈ ಸಾಧನೆಯನ್ನು ಉರ್ವಿಲ್ ಪಟೇಲ್ ಸರಿಗಟ್ಟಿದ್ದು, ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 8 ಬೌಂಡರಿ ಒಳಗೊಂಡಂತೆ 111 ರನ್ ಸಿಡಿಸಿದರು. ಈ ಪಂದ್ಯದಲ್ಲಿ ಗುಜರಾತ್ ತಂಡವು 13.1 ಓವರ್ಗಳಲ್ಲಿ 185 ರನ್ ಬಾರಿಸಿ 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.