ಕ್ರೀಡೆ

ಈ ರೀತಿ ಆದ್ರೆ ನಾವು ಹೈದರಾಬಾದ್​ ಬಿಟ್ಟು ಹೋಗ್ತೀವಿ... ಕಾವ್ಯಾ ಮಾರನ್​ ತಂಡದಿಂದ ಖಡಕ್​ ಎಚ್ಚರಿಕೆ! SRH

SRH : ಪ್ರಸಕ್ತ ಐಪಿಎಲ್ ಟೂರ್ನಿಯ ಉಚಿತ ಪಾಸ್‌ಗಳ ವಿಚಾರದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮ್ಯಾನೇಜ್‌ಮೆಂಟ್ ಮತ್ತು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​(ಎಚ್‌ಸಿಎ) ನಡುವಿನ ಜಗಳ ತಾರಕಕ್ಕೇರಿದೆ.

ಪಂದ್ಯದ ಉಚಿತ ಪಾಸ್‌ಗಳಿಗಾಗಿ ಎಚ್‌ಸಿಎ ಅಧ್ಯಕ್ಷ ಜಗನ್ಮೋಹನ್ ರಾವ್ ಅವರು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸನ್‌ರೈಸರ್ಸ್ ಮ್ಯಾನೇಜ್‌ಮೆಂಟ್ ಗಂಭೀರ ಆರೋಪಗಳನ್ನು ಮಾಡಿದೆ. ಇದೇ ರೀತಿ ಕಿರುಕುಳ ಕೊಟ್ಟರೆ ಹೈದರಾಬಾದ್ ತೊರೆಯುವುದಾಗಿ ಎಸ್​ಆರ್​ಎಚ್​ ಮ್ಯಾನೇಜ್​ಮೆಂಟ್​ ಎಚ್ಚರಿಕೆ ನೀಡಿದೆ. ಸನ್‌ರೈಸರ್ಸ್ ತಂಡದ ಜನರಲ್ ಮ್ಯಾನೇಜರ್ ಟಿಬಿ ಶ್ರೀನಾಥ್ ಅವರು ಈ ವಿಷಯದ ಬಗ್ಗೆ ಎಚ್‌ಸಿಎ ಖಜಾಂಚಿ ಸಿಜೆ ಶ್ರೀನಿವಾಸ್ ರಾವ್ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಉಚಿತ ಪಾಸ್‌ಗಳಿಗಾಗಿ ಎಚ್​ಸಿಎ ಅಧ್ಯಕ್ಷ ಎ. ಜಗನ್​ ಮೋಹನ್ ರಾವ್‌ ಅವರು ಎಸ್​ಆರ್​ಎಚ್​ ಮ್ಯಾನೇಜ್​ಮೆಂಟ್​ಗೆ ನೀಡುತ್ತಿರುವ ಕಿರುಕುಳ ತೀವ್ರಗೊಂಡಿದೆ. ನಾವು ಅಂತಹ ನಡವಳಿಕೆಯನ್ನು ಸಹಿಸುವುದಿಲ್ಲ. ಇದು ಮುಂದುವರಿದರೆ, ಸ್ಥಳವನ್ನು ಬದಲಾಯಿಸಲು ಕೂಡ ನಾವು ಹಿಂಜರಿಯುವುದಿಲ್ಲ. ಅವರ ನಡವಳಿಕೆ ನೋಡಿದರೆ, ನಾವು ಉಪ್ಪಲ್ ಕ್ರೀಡಾಂಗಣವನ್ನು ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡು ಆಡುವುದನ್ನು ಅವರಿಗೆ ಇಷ್ಟವಿಲ್ಲ ಎಂದು ತೋರುತ್ತದೆ. ಈ ರೀತಿಯಾದರೆ, ನೀವು ನಮಗೆ ಲಿಖಿತವಾಗಿ ತಿಳಿಸಿ. ನಾವು ಬಿಸಿಸಿಐ, ತೆಲಂಗಾಣ ಸರ್ಕಾರ ಮತ್ತು ನಮ್ಮ ಆಡಳಿತ ಮಂಡಳಿಗೆ ಈ ಬಗ್ಗೆ ತಿಳಿಸುತ್ತೇವೆ. ನೀವು ಬಸಿದರೆ, ನಿಮ್ಮ ಇಚ್ಛೆಯಂತೆ ನಾವು ಹೈದರಾಬಾದ್‌ನಿಂದ ಹೊರಹೋಗುತ್ತೇವೆ ಎಂದು ಸನ್‌ರೈಸರ್ಸ್ ಪ್ರತಿನಿಧಿ ಎಚ್‌ಸಿಎ ಖಜಾಂಚಿಗೆ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಸನ್‌ರೈಸರ್ಸ್ ಜನರಲ್ ಮ್ಯಾನೇಜರ್ ಟಿಬಿ ಶ್ರೀನಾಥ್ ಕೂಡ ತಮ್ಮ ಇಮೇಲ್‌ನಲ್ಲಿ ಈ ವಿಷಯಗಳ ಬಗ್ಗೆ ಬರೆದಿದ್ದಾರೆ. ನಾವು ಕಳೆದ 12 ವರ್ಷಗಳಿಂದ ಎಚ್‌ಸಿಎ ಜೊತೆ ಕೆಲಸ ಮಾಡುತ್ತಿದ್ದೇವೆ. ಕಳೆದ ಸೀಸನ್‌ನಿಂದ ಮಾತ್ರ ನಾವು ಈ ಸಮಸ್ಯೆಗಳು ಮತ್ತು ಕಿರುಕುಳವನ್ನು ಎದುರಿಸುತ್ತಿದ್ದೇವೆ. ಹಿಂದಿನ ಒಪ್ಪಂದದ ಭಾಗವಾಗಿ, ನಾವು ಅವರಿಗೆ ಪ್ರತಿ ಸೀಸನ್‌ನಲ್ಲಿ 50 ಉಚಿತ ಟಿಕೆಟ್‌ಗಳನ್ನು (ಎಫ್ 12 ಎ ಬಾಕ್ಸ್) ನೀಡುತ್ತಿದ್ದೇವೆ. ಈ ವರ್ಷ ಅವರು ಹೆಚ್ಚುವರಿಯಾಗಿ 20 ಟಿಕೆಟ್‌ಗಳನ್ನು ನೀಡುತ್ತಿದ್ದಾರೆ. ಈ ವಿಷಯ ನಮ್ಮ ಗಮನಕ್ಕೆ ಬಂದಾಗ, ನಾವು ಅದನ್ನು ಚರ್ಚಿಸಿ ಸೌಹಾರ್ದಯುತ ಪರಿಹರಿಸಿಕೊಳ್ಳುವುದಾಗಿ ತಿಳಿಸಿದ್ದೆವು. ಆದರೆ, HCA ಪ್ರತಿನಿಧಿಗಳು ಅತಿಯಾಗಿ ಪ್ರತಿಕ್ರಿಯಿಸಿದ್ದಾರೆ.

SRH-LSG ಪಂದ್ಯದ ದಿನದಂದು, ಅವರು ಸೀಟಿಂಗ್ ಬಾಕ್ಸ್ (F3) ಅನ್ನು ಲಾಕ್ ಮಾಡಿದರು. ನಾವು ಕೇಳಿದ ಹೆಚ್ಚುವರಿ ಟಿಕೆಟ್‌ಗಳನ್ನು ನೀಡದಿದ್ದರೆ ಮಾತ್ರ ಲಾಕ್ ತೆರೆಯುವುದಾಗಿ ಬೆದರಿಕೆ ಹಾಕಿದರು. ಕಳೆದ ಎರಡು ವರ್ಷಗಳಲ್ಲಿ, ನಮ್ಮ ಸಿಬ್ಬಂದಿಗೆ HCA ಯಿಂದ ಇಂತಹ ಹಲವು ಬೆದರಿಕೆಗಳು ಬಂದಿವೆ. ಅಧ್ಯಕ್ಷ ಜಗನ್​ ಮೋಹನ್​ ರಾವ್ ಈ ವರ್ಷವಷ್ಟೇ ನಮಗೆ ಹಲವು ಬಾರಿ ಬೆದರಿಕೆ ಹಾಕಿದ್ದಾರೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನಾವು ಕ್ರೀಡಾಂಗಣಕ್ಕೆ ಬಾಡಿಗೆ ಪಾವತಿಸುತ್ತಿದ್ದೇವೆ. ಐಪಿಎಲ್ ಸಮಯದಲ್ಲಿ ಕ್ರೀಡಾಂಗಣ ನಮ್ಮ ವಶದಲ್ಲಿರಬೇಕು ಎಂದು ಶ್ರೀನಾಥ್ ತಮ್ಮ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ (ಉಪ್ಪಲ್ ಕ್ರೀಡಾಂಗಣ) ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ತವರು ಮೈದಾನವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. (ಏಜೆನ್ಸೀಸ್​)