ಲಾಹೋರ್: ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಪಾಕಿಸ್ತಾನದ ನೆಲದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಐಸಿಸಿಯ ಈ ಮೆಗಾ ಈವೆಂಟ್‌ಗಾಗಿ ಟೀಮ್ ಇಂಡಿಯಾ ತಮ್ಮ ದೇಶಕ್ಕೆ ಪ್ರವಾಸ ಮಾಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಆ ದೇಶದ ಮಾಜಿ ಆಟಗಾರರು ಒತ್ತಾಯಿಸಿದ್ದಾರೆ. ಭಾರತ ಕ್ರಿಕೆಟ್ ತಂಡ ತಮ್ಮ ದೇಶಕ್ಕೆ ಬರದಿದ್ದರೆ ಭಾರತದಲ್ಲಿ ನಡೆಯುವ ಐಸಿಸಿ ಟೂರ್ನಿಗಳಿಗೆ ನಾವು ಭಾಗಿಯಾಗುವುದಿಲ್ಲ ಎಂದು ಪಾಕ್ ಹುಸಿ ನಾಟಕವಾಡಲು ಪ್ರಾರಂಭಿಸಿದೆ.
ಇದನ್ನೂ ಓದಿ: ಡ್ರೆಸ್ಸಿಂಗ್ ರೂಮ್ನಲ್ಲಿ ಕೈ ಕೈ ಮಿಲಾಯಿಸಿದ ಇಬ್ಬರು ಪಾಕ್ ಆಟಗಾರರು! ಮಧ್ಯಸ್ಥಿಕೆ ವಹಿಸಿದವನಿಗೂ ಬಿತ್ತಾ ಗೂಸಾ?
ಟೀಮ್ ಇಂಡಿಯಾ ಆಟಗಾರರ ಭದ್ರತಾ ದೃಷ್ಟಿಯಿಂದ ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಾವು ಸಿದ್ಧವಿಲ್ಲ. ಕಳುಹಿಸಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಬೇಕು ಎಂಬುದನ್ನೂ ಈಗಾಗಲೇ ಬಿಸಿಸಿಐ ಬಹಿರಂಗಪಡಿಸಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವಂತೆ ಈಗಾಗಲೇ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ. ಆದ್ರೆ, ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಜಯ್ ಷಾ ನೇತೃತ್ವದ ತಂಡ ಇನ್ನು ಮನಸ್ಸು ಮಾಡಿದಂತೆ ಕಂಡುಬಂದಿಲ್ಲ. ಸದ್ಯ ಭಾರತ ಪಾಕ್ ನೆಲಕ್ಕೆ ಬರುವುದು ಬಹುತೇಕ ಡೌಟ್ ಎಂದು ತಿಳಿದಿದ್ದರೂ ಸಹ ಭರವಸೆ ವ್ಯಕ್ತಪಡಿಸಿರುವ ಪಾಕ್ ಮಾಜಿ ಕ್ರಿಕೆಟಿಗ ಬಸಿತ್ ಅಲಿ, ಈ ವರ್ಷದ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ, ಟೀಮ್ ಇಂಡಿಯಾ ನಮ್ಮ ನೆಲದಲ್ಲಿ ಆಡುವುದು ಖಚಿತವಾಗಲಿದೆ ಎಂದಿದ್ದಾರೆ.
"ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ ಆತಿಥೇಯ ವಹಿಸಿರುವ ಪಾಕಿಸ್ತಾನ, ಸಭೆಗೆ ಆಯಾ ದೇಶದ ಪ್ರಧಾನಿಗಳಿಗೆ ಆಹ್ವಾನ ನೀಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ದೇಶಗಳ ಮುಖ್ಯಸ್ಥರಿಗೆ ನಾವು ಆಹ್ವಾನಗಳನ್ನು ಕಳುಹಿಸಿದ್ದೇವೆ" ಎಂದು ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ. ಸದ್ಯ ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಮಾತನಾಡಿರುವ ಬಸಿತ್ ಅಲಿ, ಭಾರತದ ಪ್ರಧಾನಿ ಅಕ್ಟೋಬರ್‌ನಲ್ಲಿ ದೇಶಕ್ಕೆ ಭೇಟಿ ನೀಡಿದರೆ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಪಾಕಿಸ್ತಾನದಲ್ಲಿ ಆಡಬಹುದು. ಅಕಸ್ಮಾತ್ ಅವರು ಪಾಕಿಸ್ತಾನಕ್ಕೆ ಬರಲಿಲ್ಲ ಎಂದರೆ ಟೀಮ್ ಇಂಡಿಯಾವನ್ನು ಕಳಿಸುವುದು, ಬಿಡುವುದು ಐಸಿಸಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ,(ಏಜೆನ್ಸೀಸ್).