ಕ್ರೀಡೆ

ಈತ ಏನಾದ್ರೂ ಐಪಿಎಲ್​ ಹರಾಜಿಗೆ ಬಂದ್ರೆ 520 ಕೋಟಿ ಕೂಡ ಸಾಕಾಗಲ್ಲ! ಆಶಿಶ್​ ನೆಹ್ರಾ ಅಚ್ಚರಿ ಹೇಳಿಕೆ | Ashish Nehra

Ashish Nehra : ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲು ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲಿರುವುದು ಗೊತ್ತೇ ಇದೆ. ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್ ಕ್ರೀಡಾಂಗಣದಲ್ಲಿ ಕೆಲವು ದಿನಗಳ ಹಿಂದೆ ನಡೆಯಿತು. ಈ ಪಂದ್ಯದಲ್ಲಿ ಜಸ್ಪ್ರೀತ್​ ಬುಮ್ರಾ ನಾಯಕತ್ವದಲ್ಲಿ ಟೀಮ್​ ಇಂಡಿಯಾ 295 ರನ್‌ಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಕಾಂಗರೂ ನೆಲದಲ್ಲಿ ದಾಖಲಿಸಿದ ಅತಿ ದೊಡ್ಡ ಗೆಲುವು ಇದಾಗಿದೆ.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ನಾಯಕ ಮತ್ತು ಬೌಲರ್‌ ಆಗಿ ಬುಮ್ರಾ ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಬುಮ್ರಾ ಅವರು ಒಟ್ಟು ಎಂಟು ವಿಕೆಟ್ ಪಡೆದು ಆಸೀಸ್ ಬ್ಯಾಟಿಂಗ್ ಕ್ರಮಾಂಕವನ್ನೇ ನಾಶಪಡಿಸಿದರು. ಟೀಮ್​​ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಟೆಸ್ಟ್​ ಪಂದ್ಯದಲ್ಲಿ ಬುಮ್ರಾ ಸಾಧನೆಯನ್ನು ಕೊಂಡಾಡಿದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಬುಮ್ರಾ ಏನಾದರೂ ಐಪಿಎಲ್ ಹರಾಜಿಗೆ ಬಂದರೆ ಅದು ಪವಾಡವೇ ಸರಿ. ಏಕೆಂದರೆ, ಫ್ರಾಂಚೈಸಿಗಳಿಗೆ 520 ಕೋಟಿ ರೂಪಾಯಿ ಪರ್ಸ್ ಕೂಡ ಸಾಕಾಗುವುದಿಲ್ಲ. ಹರಾಜಿನ ಪೈಪೋಟಿಯಲ್ಲಿ ಅವರನ್ನು ಸೋಲಿಸಲು ಯಾರಿಂದಲೂ ಆಗಲ್ಲ ಎಂದಿದ್ದಾರೆ.

ಆಸಿಸ್​ ಪ್ರವಾಸದ ಮೊದಲ ಟೆಸ್ಟ್​ ಪಂದ್ಯದಲ್ಲೇ ನಾಯಕ ರೋಹಿತ್ ಶರ್ಮ ಗೈರಾದರು. ಹೀಗಾಗಿ ಈ ಪಂದ್ಯದಲ್ಲಿ ಬುಮ್ರಾ ನಾಯಕರಾಗಿದ್ದರು. ನಿಸ್ಸಂಶಯವಾಗಿ ಇದು ಹೆಚ್ಚುವರಿ ಒತ್ತಡ ಬೀರುತ್ತದೆ. ಆದರೆ, ಬುಮ್ರಾ ಆ ಒತ್ತಡವನ್ನು ನಿಭಾಯಿಸಿದ ರೀತಿ ಅತ್ಯಂತ ಪ್ರಶಂಸನೀಯವಾಗಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ 3-0 ಅಂತರದಲ್ಲಿ ವೈಟ್‌ವಾಶ್ ಆದ ನಂತರ ಭಾರತ ತಂಡ, ಬುಮ್ರಾ ನಾಯಕತ್ವದಲ್ಲಿ ಅದ್ಭುತವಾಗಿ ಆಡಿದೆ. ಅವರೇನಾದರೂ ಐಪಿಎಲ್​ ಹರಾಜಿಗೆ ಬಂದರೆ 520 ಕೋಟಿ ರೂ. ಸಾಕಾಗುವುದಿಲ್ಲ ಅನಿಸುತ್ತದೆ ಎಂದು ಸ್ಟಾರ್​ ಸ್ಪೋರ್ಟ್ಸ್​ಗೆ ನೆಹ್ರಾ ತಿಳಿಸಿದರು.

ಅಂದಹಾಗೆ ನೆಹ್ರಾ ಅವರು ಗುಜರಾತ್​ ಟೈಟಾನ್ಸ್​ ತಂಡದ ಕೋಚ್​ ಆಗಿದ್ದಾರೆ. 2022ರಲ್ಲಿ ಗುಜರಾತ್​ ಟೈಟಾನ್ಸ್​ ಐಪಿಎಲ್​ ಗೆಲುವಿನಲ್ಲಿ ನೆಹ್ರಾ ಕೂಡ ಪ್ರಮುಖ ಪಾತ್ರವಹಿಸಿದರು. ಇನ್ನು ಬುಮ್ರಾ ವಿಚಾರಕ್ಕೆ ಬರುವುದಾದರೆ, 2013 ರಿಂದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಾಗಿ ಆಡುತ್ತಿದ್ದಾರೆ. ಅವರು ಮುಂಬೈ ತಂಡದ ಪ್ರಮುಖ ಆಟಗಾರ. ಈ 11 ವರ್ಷಗಳಲ್ಲಿ ಮುಂಬೈ ತಂಡ ಒಮ್ಮೆಯೂ ಬುಮ್ರಾ ಅವರನ್ನು ಹರಾಜಿನಲ್ಲಿ ಬಿಟ್ಟಿಲ್ಲ ಅಂದರೆ ಅವರಿಗೆ ಎಷ್ಟು ಕ್ರೇಜ್ ಇದೆ ಎಂಬುದನ್ನು ಸುಲಭವಾಗಿ ಊಹಿಸಬಹುದು.

ಇತ್ತೀಚೆಗೆ ಮುಕ್ತಾಯವಾದ ಐಪಿಎಲ್​ ಮೆಗಾ ಹರಾಜಿಗೂ ಮುನ್ನವೇ ಮುಂಬೈ ತಂಡ ರಿಟೇನ್​ ಮಾಡಿಕೊಂಡ ಮೊದಲ ಆಟಗಾರ ಬುಮ್ರಾ ಅವರು. ಬರೋಬ್ಬರಿ 18 ಕೋಟಿ ರೂ. ನೀಡಿ ಮುಂಬೈ ತಂಡ ಅವರನ್ನು ಉಳಿಸಿಕೊಂಡಿತು. (ಏಜೆನ್ಸೀಸ್​)