ನವದೆಹಲಿ: ಅದೊಂದು ಕಾಲವಿತ್ತು. ಕ್ಯಾಪ್ಟನ್ ಎಂದರೆ ಸೌರವ್ ಗಂಗೂಲಿ. ಬ್ಯಾಟ್ಸ್ಮನ್ಗಳೆಂದರೆ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್. ಈ ನಾಲ್ವರನ್ನು ಟೀಂ ಇಂಡಿಯಾದ ಐಕಾನಿಕ್ ಚತುಷ್ಟಯರು ಎಂದೇ ಕರೆಯಲಾಗುತ್ತಿತ್ತು.
ಈ ನಾಲ್ವರು ಇರುವ ತಂಡವನ್ನು ಎದುರಿಸಲು ಬಲಿಷ್ಠ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದಂಥ ತಂಡಗಳು ಕೂಡ ನಡಗುತ್ತಿದ್ದವು. ಈ ಸಂದರ್ಭದಲ್ಲೇ ಟೀಂ ಇಂಡಿಯಾ ವಿದೇಶಗಳಲ್ಲೂ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಗೆದ್ದು, ಸರ್ವಶ್ರೇಷ್ಠ ತಂಡವೆನಿಸಿಕೊಂಡಿತ್ತು.
ಇದೀಗ ಈ ನಾಲ್ವರು ದಿಗ್ಗಜ ಆಟಗಾರರು ಬ್ಯಾಟ್ಗಳಿಗೆ ವಿಶ್ರಾಂತಿ ನೀಡಿದ್ದಾರೆ. ಇವರ ಪೈಕಿ ಈಗ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಾಯಕತ್ವ ವಹಿಸಿಕೊಂಡಿದ್ದಾರೆ. ಇನ್ನು ಮೂವರು ಆಟಗಾರರು ಒಂದಲ್ಲ ಒಂದು ರೀತಿಯಲ್ಲಿ ಇನ್ನೂ ಭಾರತ ಕ್ರಿಕೆಟ್ ರಂಗದೊಂದಿಗೆ ನಂಟು ಉಳಿಸಿಕೊಂಡಿದ್ದಾರೆ.
ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ತಾವು ನಾಲ್ವರು ಇರುವ ಚಿತ್ರವನ್ನು ಟ್ವೀಟ್ ಮಾಡಿ, ಆಡುವ ದಿನಗಳ ಅವಿಸ್ಮರಣೀಯ ಸಮಯ, ಈ ಐಕಾನಿಕ್ ಚತುಷ್ಟಯರ ನಂತರದಲ್ಲಿ ಯಾರಾದರೂ ಐಕಾನಿಕ್ ಆಟಗಾರರಿದ್ದರೆ ಹೆಸರಿಸಿ... ನಾವು ಕಾಯುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಈ ನಾಲ್ವರನ್ನು ಐಕಾನಿಕ್ ಚತುಷ್ಟಯರು ಎಂದು ಏಕೆ ಕರೆಯಲಾಗುತ್ತದೆ ಗೊತ್ತೇ? ಈ ನಾಲ್ವರು ಒಟ್ಟಾಗಿ ಒಟ್ಟು 2,151 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವರ ಬ್ಯಾಟ್ಗಳಿಂದ 1 ಲಕ್ಷಕ್ಕೂ ಹೆಚ್ಚು ರನ್ ಹರಿದಿದೆ. ಇವರೆಲ್ಲರೂ ಸೇರಿ ಒಟ್ಟು 247 ಶತಕಗಳನ್ನು ಗಳಿಸಿದ್ದಾರೆ. ಇವರ ಬ್ಯಾಟಿಂಗ್ ಶ್ರೇಷ್ಠತೆ ಸಾರಲು ಈ ಅಂಕಿಅಂಶಗಳು ಸಾಕೆನಿಸುತ್ತದೆ.