ದುಬೈ: ಕರೊನಾ ಹಾವಳಿ ಭುಗಿಲೇಳುವುದಕ್ಕೆ ಮುನ್ನ ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ, ಡಿಜಿಟಲ್ ಮತ್ತು ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಮಹಿಳೆಯರ ಕ್ರೀಡೆಯಲ್ಲಿ ಇದು ಅತ್ಯಧಿಕ ಸಂಖ್ಯೆಯ ಜನರು ವೀಕ್ಷಿಸಿದ ಕ್ರೀಡಾಕೂಟವೆನಿಸಿದೆ.
ಫೆಬ್ರವರಿ 21ರಿಂದ ಮಾರ್ಚ್ 8ರವರೆಗೆ ನಡೆದ ಟಿ20 ವಿಶ್ವಕಪ್ ಟೂರ್ನಿಯನ್ನು ಒಟ್ಟಾರೆ 1.1 ಶತಕೋಟಿ ವೀಕ್ಷಕರು ಡಿಜಿಟಲ್ ಮತ್ತು ಟಿವಿ ಮಾಧ್ಯಮದ ಮೂಲಕ ನೋಡಿದ್ದಾರೆ ಎಂದು ಐಸಿಸಿ ಗುರುವಾರ ತಿಳಿಸಿದೆ. ಇದು 2019ರ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಐಸಿಸಿಯ 2ನೇ ಅತ್ಯಂತ ಯಶಸ್ವಿ ಟೂರ್ನಿ ಎನಿಸಿದೆ. 2018ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದ ಹಿಂದಿನ ಮಹಿಳಾ ಟಿ20 ವಿಶ್ವಕಪ್ ಆವೃತ್ತಿಯ 20 ಪಟ್ಟು ಅಧಿಕ ವಿಡಿಯೋ ವೀಕ್ಷಕರ ಸಂಖ್ಯೆ ಇದಾಗಿದೆ. ಮಹಿಳಾ ಕ್ರಿಕೆಟ್ ಇತಿಹಾಸದ ಹಿಂದಿನ ಅತ್ಯಂತ ಯಶಸ್ವಿ ಟೂರ್ನಿಯಾಗಿರುವ 2017ರ ಏಕದಿನ ವಿಶ್ವಕಪ್ ಟೂರ್ನಿಗಿಂತ 10 ಪಟ್ಟು ಅಧಿಕವಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯವನ್ನು ದಾಖಲೆಯ 86,174 ಪ್ರೇಕ್ಷಕರು ವೀಕ್ಷಿಸಿದ್ದರು. ಇದು ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಕ್ರೀಡಾ ಸ್ಪರ್ಧೆ ಮತ್ತು ಮಹಿಳಾ ಕ್ರಿಕೆಟ್ನಲ್ಲಿ ಅತ್ಯಧಿಕ ಪ್ರೇಕ್ಷಕರ ಸಂಖ್ಯೆಯಾಗಿದೆ.
ಕರೊನಾ ವೈರಸ್ ವಿರುದ್ಧ ಜಹನಾರ ಹೋರಾಟ
ಬಾಂಗ್ಲಾದೇಶ ಮಹಿಳಾ ತಂಡದ ವೇಗದ ಬೌಲರ್ ಜಹನಾರ ಅಲಂ ತಮ್ಮ 27ವರ್ಷದ ಹುಟ್ಟುಹಬ್ಬದ ಅಂಗವಾಗಿ 50 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ಕರೊನಾ ವೈರಸ್ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಸಂಭ್ರಮ ದಿಂದ ದೂರ ಉಳಿದರು.