ಕ್ರೀಡೆ

ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಭಾರತ: ಇಂದು ನ್ಯೂಜಿಲೆಂಡ್ ಎದುರಾಳಿ, ಗೆದ್ದರೆ ಸೆಮಿಫೈನಲ್ ಸ್ಥಾನ ಖಚಿತ

ಮೆಲ್ಬೋರ್ನ್: ಸರಿಯಾಗಿ ಒಂದು ವರ್ಷದ ಹಿಂದೆ ಭಾರತ ಹಾಗೂ ಕಿವೀಸ್ ತಂಡಗಳು ನ್ಯೂಜಿಲೆಂಡ್​ನಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಆಗ ಭಾರತ ತಂಡ 0-3ರಿಂದ ವೈಟ್​ವಾಷ್ ಅವಮಾನ ಕಂಡಿತ್ತು. ಈಗ ಮಹಿಳೆಯರ ಟಿ20 ವಿಶ್ವಕಪ್ ಕಣದಲ್ಲಿ ಮತ್ತೊಮ್ಮೆ ಮುಖಾಮುಖಿಗೆ ಸಜ್ಜಾಗಿದೆ. ಭಾರತದ ಹ್ಯಾಟ್ರಿಕ್ ಗೆಲುವಿನ ಅವಕಾಶ ತಡೆಯುವ ನಿಟ್ಟಿನಲ್ಲಿ ಗುರುವಾರ ವೈಟ್ ಫೆರ್ನ್ಸ್ ಖ್ಯಾತಿಯ ನ್ಯೂಜಿಲೆಂಡ್ ತಂಡ ಕಣಕ್ಕಿಳಿಯಲಿದ್ದರೆ, ಸತತ 3ನೇ ಗೆಲುವಿನೊಂದಿಗೆ ಸೆಮಿಫೈನಲ್ ಸ್ಥಾನವನ್ನು ಖಚಿತಮಾಡಿಕೊಳ್ಳುವ ಮುಖ್ಯ ಉದ್ದೇಶದೊಂದಿಗೆ ಭಾರತ ತಂಡ ಆಡಲಿದೆ.

ಮೆಲ್ಬೋರ್ನ್​ನ ಜಂಕ್ಷನ್ ಓವಲ್ ಮೈದಾನದಲ್ಲಿ ಮಹತ್ವದ ಪಂದ್ಯ ನಡೆಯಲಿದ್ದು, ಭಾರತ ತಂಡ ಇಲ್ಲಿ ಪಡೆಯುವ ಗೆಲುವು, ಹಾಲಿ ಚಾಂಪಿಯನ್ ಆತಿಥೇಯ ಆಸ್ಟ್ರೇಲಿಯಾದ ಹಾದಿಯನ್ನೂ ಕಠಿಣ ಮಾಡಲಿದೆ. ಭಾರತ ವಿರುದ್ಧ ಸರಣಿಯಲ್ಲಿ ಆಡಿದ ಕಿವೀಸ್ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಭಿನ್ನ ನಾಯಕಿ, ವಿಕೆಟ್ ಕೀಪರ್ ಹಾಗೂ ಆರಂಭಿಕ ಜೋಡಿಯನ್ನು ಸದ್ಯ ಕಿವೀಸ್ ತಂಡ ಹೊಂದಿದೆ.

ಇನ್ನೊಂದೆಡೆ ಭಾರತ ತಂಡ ಕೂಡ ಯುವ ಆಟಗಾರ್ತಿಯರ ಬಲದೊಂದಿಗೆ ಇನ್ನಷ್ಟು ಶಕ್ತಿಯುತವಾಗಿ ಮೂಡಿಬಂದಿದ್ದು, ಬ್ಯಾಟಿಂಗ್​ನಲ್ಲಿ ಸ್ಪೋಟಕ ತಾರೆಯರ ಬಲ ಪಡೆದಿದೆ. ಫೀಲ್ಡಿಂಗ್​ನಲ್ಲೂ ಚುರುಕುತನ ಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವಕಪ್​ನ ಮೊದಲ ಪಂದ್ಯದಲ್ಲಿಯೇ ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿ ಅಗಾಧ ವಿಶ್ವಾಸದಲ್ಲಿದೆ.

ಕಿವೀಸ್ ತಂಡಕ್ಕೆ ಸೋಫಿ ಪ್ರಮುಖ ಬಲ: ಕಳೆದೊಂದು ವರ್ಷದಿಂದ ನ್ಯೂಜಿಲೆಂಡ್ ತಂಡಕ್ಕೆ ಆಲ್ರೌಂಡರ್ ಸೋಫಿ ಡಿವೈನ್ ದೊಡ್ಡ ಶಕ್ತಿ. ಸತತ ಆರು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದೇ ಇದಕ್ಕೆ ಸಾಕ್ಷಿ. ಈಗ ಅವರ ಮೇಲೆ ನಾಯಕತ್ವದ ಜವಾಬ್ದಾರಿಯೂ ಇದೆ. ಆದರೆ, ತಾಯ್ತನದ ರಜೆಯ ಕಾರಣ ಆಮಿ ಸ್ಯಾಟರ್ಥ್​ವೈಟ್ ಅಲಭ್ಯವಾಗಿರುವುದು ಕಿವೀಸ್ ತಂಡದ ಮೇಲೆ ಪರಿಣಾಮ ಬೀರಿದೆ. ಸ್ಪಿನ್ ಬೌಲಿಂಗ್​ಅನ್ನು ಸಲೀಸಾಗಿ ಎದುರಿಸುತ್ತಿದ್ದ ಸ್ಯಾಟರ್ಥ್​ವೈಟ್ ಅಲಭ್ಯತೆಯಿಂದಾಗಿ ಕಿವೀಸ್ ತಂಡದಲ್ಲಿ ಯಾವೊಬ್ಬ ಎಡಗೈ ಬ್ಯಾಟುಗಾರ್ತಿಯೂ ಇಲ್ಲದಂತಾಗಿದೆ. -ಪಿಟಿಐ/ಏಜೆನ್ಸೀಸ್

ಕಳೆದ 2-3 ವರ್ಷಗಳಲ್ಲಿ ಪವರ್​ಪ್ಲೇ ಅವಧಿಯ ಆಟದಲ್ಲಿ ನಾನು ಹೆಚ್ಚಾಗಿ ರನ್ ಬಾರಿಸಬೇಕಿತ್ತು. ಆದರೆ, ಈಗ ಶೆಫಾಲಿ ಇರುವುದರಿಂದ ಆಕೆಯೇ ಹೆಚ್ಚಿನ ರನ್ ಬಾರಿಸುತ್ತಾಳೆ. ಈಗ ನಾನು ಇನ್ನಷ್ಟು ನಿರಾಳವಾಗಿ ಆಡಲು ಸಾಧ್ಯವಾಗಿದೆ. ಟಿ20 ತಂಡಕ್ಕೆ ಆಕೆ ಬಂದಿದ್ದು, ದೊಡ್ಡ ಬದಲಾವಣೆ ತಂದಿದೆ. ಆಕೆ ಆಡುವ ವೇಳೆ ಬ್ಯಾಟಿಂಗ್ ಬಹಳ ಸರಳ ಎಂದನಿಸುತ್ತದೆ. | ಸ್ಮೃತಿ ಮಂದನಾ ಭಾರತ ತಂಡದ ಆಟಗಾರ್ತಿ

ಭಾರತ ಯುವ ಆಟಗಾರ್ತಿಯರ ತಂಡ

ನ್ಯೂಜಿಲೆಂಡ್ ವಿರುದ್ಧ ಕಳೆದ ಸರಣಿಯ ವೇಳೆ ಭಾರತ ತಂಡದಲ್ಲಿ ಅನುಭವಿ ಆಟಗಾರ್ತಿಯರೇ ಹೆಚ್ಚಿದ್ದರು. ಸ್ಮೃತಿ ಮಂದನಾಗೆ ಸೂಕ್ತ ಜತೆಗಾರ್ತಿಯ ಕೊರತೆ ಇತ್ತು. ಹೊಸ ಕೋಚ್ ಡಬ್ಲ್ಯುವಿ ರಾಮನ್, ತಂಡದಲ್ಲಿ ಮಿಥಾಲಿ ರಾಜ್​ಗೆ ಸ್ಥಾನ ನೀಡಬೇಕೇ ಎನ್ನುವ ಗೊಂದಲದಲ್ಲಿದ್ದರು. ಆದರೆ, ಈ ಎಲ್ಲ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಮಿಥಾಲಿ ರಾಜ್ ಟಿ20 ನಿವೃತ್ತಿಯಿಂದ ತೆರವಾದ ಸ್ಥಾನ ತುಂಬಿರುವ ಶೆಫಾಲಿ ವರ್ಮ, ಸ್ಮೃತಿಗಿಂತ ಆಕ್ರಮಣಕಾರಿಯಾಗಿ ಆಡಿದ್ದಾರೆ. ಕಿವೀಸ್ ಪ್ರವಾಸದ ವೇಳೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಶಿಖಾ ಪಾಂಡೆ ಹಾಗೂ ರಾಜೇಶ್ವರಿ ಗಾಯಕ್ವಾಡ್ ವಿಶ್ವಕಪ್​ನಲ್ಲಿ ತಂಡದ ಪ್ರಧಾನ ಅಸ್ತ್ರವಾಗಿದ್ದಾರೆ. ಕಿವೀಸ್ ತಂಡದಲ್ಲಿ ಎಡಗೈ ಆಟಗಾರ್ತಿಯರು ಇಲ್ಲದಿರುವ ಕಾರಣ, ಇನ್ನೊಬ್ಬ ಎಡಗೈ ಸ್ಪಿನ್ನರ್​ರನ್ನು ಆಡಿಸುವ ಯೋಚನೆಯನ್ನೂ ಭಾರತ ತಂಡ ಮಾಡಬಹುದು.

ಮುಖಾಮುಖಿ: 11

ಭಾರತ: 3 ನ್ಯೂಜಿಲೆಂಡ್: 8

ವಿಶ್ವಕಪ್​ನಲ್ಲಿ: 3

ಭಾರತ: 2 ನ್ಯೂಜಿಲೆಂಡ್: 1

ಪಂದ್ಯ ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್