ಕ್ರೀಡೆ

ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್‌: ದ.ಆಫ್ರಿಕಾ ಫೈನಲ್ ಪ್ರವೇಶ, ಸೆಮೀಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಜಯ

ಗುವಾಹಟಿ: ದಕ್ಷಿಣ ಆಫ್ರಿಕಾ ತಂಡ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದೆ. ನಾಯಕಿ ಲಾರಾ ವೋಲ್ವಾರ್ಡ್ (169 ರನ್, 143 ಎಸೆತ, 20 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಹಾಗೂ ಆಲ್ರೌಂಡ್ ಮಾರಿಜಾನ್ನೆ ಕಾಪ್ (20ಕ್ಕೆ 5) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ಮೊದಲ ಸೆಮಿಫೈನಲ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 125 ರನ್‌ಗಳಿಂದ ಪರಾಭವಗೊಳಿಸಿ ಪ್ರಶಸ್ತಿ ಸುತ್ತಿಗೇರಿತು.

ಬರ್ಸಾಪುರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದ.ಆಫ್ರಿಕಾ. ವೋಲ್ವಾರ್ಡ್-ತಜ್ಮಿನ್ ಭರ್ಜರಿ ಆರಂಭದ ಬಲದಿಂದ 7 ವಿಕೆಟ್‌ಗೆ 319 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ 1 ರನ್‌ಗೆ 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ಗೆ ನಾಯಕಿ ನ್ಯಾಟ್ ಸೀವರ್ ಬ್ರಂಟ್ (64 ರನ್, 76 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಅಲೀಸ್ ಕಾಪ್ಸಿ (50 ರನ್, 71 ಎಸೆತ, 6 ಬೌಂಡರಿ) ಬಲ ತುಂಬಿದರು. ಕೊನೆಯಲ್ಲಿ ಡ್ಯಾನಿ ವಾಟ್ ಹಡ್ಜ್ (34) ಹೋರಾಟದ ನಡುವೆಯೂ ಇಂಗ್ಲೆಂಡ್ ಅಂತಿಮವಾಗಿ 42.3 ಓವರ್‌ಗಳಲ್ಲಿ 194 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾ 2017, 2022ರ ಸೆಮಿೈನಲ್ ಸೋಲಿಗೆ ಸೇಡು ತೀರಿಸಿತು.

ದಕ್ಷಿಣ ಆಫ್ರಿಕಾ: 7 ವಿಕೆಟ್‌ಗೆ 319 (ಲೌರಾ ವೋಲ್ವಾರ್ಡ್ 169, ತಜ್ಮಿನ್ ಬ್ರಿಟ್ಸ್ 45, ಸುನೆ ಲುಸ್ 1, ಮಾರಿಜಾನ್ನೆ 42, ಅನ್ನೆರಿ 4, ಟ್ರೈಯಾನ್ 33*, ಡಿ ಕ್ಲರ್ಕ್ 11*, ಎಕೆಲ್‌ಸ್ಟೋನ್ 44ಕ್ಕೆ 4). ಇಂಗ್ಲೆಂಡ್: 42.3 ಓವರ್‌ಗಳಲ್ಲಿ 194 (ಜೋನ್ಸ್ 0, ಬ್ಯೂ ಮೌಂಟ್ 0, ಹೀದರ್ 0, ನ್ಯಾಟ್ ಸೀವರ್ 64, ಅಲಿಸ್ ಕಾಪ್ಸಿ 50, ಡ್ಯಾನಿ ವ್ಯಾಟ್ ಹಡ್ಜ್ 34 ಎಕೆಲ್‌ಸ್ಟೋನ್ 2, ಲಿನ್ಸೆ ಸ್ಮಿತ್ 27, ಮಾರಿಜಾನ್ನೆ 20ಕ್ಕೆ 5, ಡಿಕ್ಲರ್ಕ್ 24ಕ್ಕೆ 2).

1. ಲೌರಾ ವೋಲ್ವಾರ್ಡ್ ಐಸಿಸಿ ಏಕದಿನ ವಿಶ್ವಕಪ್ ನಾಕೌಟ್‌ನಲ್ಲಿ ಶತಕ ಸಿಡಿಸಿದ ಮೊದಲ ಮಹಿಳಾ ನಾಯಕಿ. ಹಾಗೂ ಏಕದಿನದಲ್ಲಿ 5 ಸಾವಿರ ರನ್ ಪೂರೈಸಿದ ವಿಶ್ವದ 5ನೇ ಬ್ಯಾಟುಗಾರ್ತಿ ಎನಿಸಿದರು.