ಕ್ರೀಡೆ

Bilateral Series ಆಡದ ಹೊರತು ಐಸಿಸಿ ಟೂರ್ನಿಗಳಲ್ಲಿ ಭಾರತ-ಪಾಕ್​ ಪಂದ್ಯಗಳನ್ನು ನಡೆಸಬಾರದು: ಕಮ್ರಾನ್​ ಅಕ್ಮಲ್​ ಆಗ್ರಹ

ನವದೆಹಲಿ: ವರ್ಷ ಕಳೆದಂತೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಡುತ್ತಿದ್ದು, ಉಗ್ರವಾದದಿಂದಾಗಿ ಉಭಯ ದೇಶಗಳ ನಡುವಿನ ಕ್ರೀಡಾ ಸಂಬಂಧವು ಹಳಸಿದೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ (Bilateral Series) ನಡೆದು 12 ವರ್ಷಗಳೇ ಕಳೆದಿವೆ. ಈ ಹನ್ನೆರಡು ವರ್ಷಗಳಲ್ಲಿ ಉಭಯ ತಂಡಗಳು ಐಸಿಸಿ ಹಾಗೂ ಏಷ್ಯಾಕಪ್​ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಇದೀಗ ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್​ ಅಕ್ಮಲ್​ (Kamran Akmal) ಅಪಸ್ವರ ತೆಗೆದಿದ್ದು, ಐಸಿಸಿ ಹಾಗೂ ಏಷ್ಯಾಕಪ್​ ಟೂರ್ನಿಗಳಲ್ಲಿ ಮುಖಾಮುಖಿಗೂ ಬೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ.

ಇಷ್ಟು ದಿನ ಚಾಂಪಿಯನ್ಸ್​ ಟ್ರೋಫಿ (Champions Trophy) ವಿಚಾರವಾಗಿ ಭುಗಿಲೆದ್ದಿದ್ದ ವಿವಾದ ಸುಖಾಂತ್ಯ ಕಂಡಿದ್ದು, ಇದರ ಬೆನ್ನಲ್ಲೇ ಉಭಯ ದೇಶಗಳು ಐಸಿಸಿ ಟೂರ್ನಿಗಳಲ್ಲೂ ಮುಖಾಮುಖಿಯಾಗಬಾರದೆಂದು ಕಮ್ರಾನ್ ಅಕ್ಮಲ್​​ (Kamran Akmal) ಆಗ್ರಹಿಸಿದ್ದಾರೆ. ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ.

ಭಾರತ (India) ಮತ್ತು ಪಾಕಿಸ್ತಾನ (Pakistan) ದ್ವಿಪಕ್ಷೀಯ ಸರಣಿ (Bilateral Series) ಆಡದ ಹೊರತು ಯಾವುದೇ ಟೂರ್ನಿಯಲ್ಲೂ ಮುಖಾಮುಖಿಯಾಗಬಾರದು. ಸರಣಿ ಆಡಲು ಸಾಧ್ಯವಾಗದಿದ್ದರೆ, ಪ್ರಮುಖ ಟೂರ್ನಿಯಲ್ಲೇಕೆ ಉಭಯ ತಂಡಗಳು ಮುಖಾಮುಖಿಯಾಗಬೇಕು. ಈ ವಿಚಾರಚಾಗಿ ಐಸಿಸಿ ಕಠಿಣವಾದ ನಿಲುವನ್ನು ತೆಗೆದುಕೊಳ್ಳಬೇಕಾಗಿದೆ. ಭಾರತ ಕ್ರೀಡೆಯೊಂದಿಗೆ ರಾಜಕೀಯವನ್ನು ಬೆರೆಸುತ್ತಿದೆ. ಇದಕ್ಕೆ ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಬೆಳವಣಿಗೆಗಳು ಪ್ರಮುಖ ಸಾಕ್ಷಿಯಾಗಿದೆ.

ಭಾರತಕ್ಕೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ (Bilateral Series) ಆಡುವ ಅವಶ್ಯಕತೆಯಿಲ್ಲದಿದ್ದರೂ ಐಸಿಸಿ ಟೂರ್ನಿಗಳಲ್ಲಿ ಮಾತ್ರ ನಮ್ಮ ತಂಡವನ್ನು ಎದುರಿಸುತ್ತಿದೆ. ಇದಕ್ಕಾಗಿ ಐಸಿಸಿ ಪ್ರತಿ ಟೂರ್ನಿಯಲ್ಲೂ ಭಾರತ-ಪಾಕಿಸ್ತಾನ ನಡುವೆ ಪಂದ್ಯವನ್ನು ಏರ್ಪಡಿಸುತ್ತಿದೆ. ಹೀಗಾಗಿ ದ್ವಿಪಕ್ಷೀಯ ಸರಣಿಯನ್ನು ಪುನರಾಂಭಿಸದ ಹೊರತಾಗಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಯಾವುದೇ ಪಂದ್ಯವಾಡಬಾರದು ಎಂದು ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ (Kamran Akmal) ಆಗ್ರಹಿಸಿದ್ದಾರೆ.