ಭಾರತದ ಕ್ರಿಕೆಟಿಗರಾದ ರವೀಂದ್ರ ಜಡೇಜಾ ಹಾಗೂ ಅಭಿಷೇಕ್​ ಶರ್ಮಾ 
ಕ್ರೀಡೆ

4 ವರ್ಷಗಳ ಬಳಿಕ ನಂ.1 ಟೆಸ್ಟ್ ಆಲ್‌ರೌಂಡರ್ ಪಟ್ಟ ಕಳೆದುಕೊಂಡ ಜಡೇಜಾ, ಟಿ20ಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಅಭಿಷೇಕ್..! ICC Rankings

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್ ( ICC Rankings ) ಪಟ್ಟಿಯಲ್ಲಿ ಭಾರಿ ಬದಲಾವಣೆಗಳು ಕಂಡುಬಂದಿವೆ. ಸುದೀರ್ಘ ನಾಲ್ಕು ವರ್ಷಗಳ ಕಾಲ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಭಾರತದ ಹಿರಿಯ ಆಟಗಾರ ರವೀಂದ್ರ ಜಡೇಜಾ ತಮ್ಮ ನಂ. 1 ಕಿರೀಟವನ್ನು ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, ಟಿ20 ಕ್ರಿಕೆಟ್‌ನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಉದಯೋನ್ಮುಖ ತಾರೆ ಅಭಿಷೇಕ್ ಶರ್ಮಾ ತಮ್ಮದೇ ದೇಶದ ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿ ಮತ್ತೆ ವಿಶ್ವದ ನಂ. 1 ಟಿ20 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮಾರ್ಕೊ ಜಾನ್ಸೆನ್ ತಮ್ಮ ಕ್ರೀಡಾ ಬದುಕಿನಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನ ಬೌಲಿಂಗ್ ಹಾಗೂ ಆಲ್‌ರೌಂಡರ್ ವಿಭಾಗಗಳೆರಡರಲ್ಲೂ ವಿಶ್ವದ ನಂ. 1 ಪಟ್ಟಕ್ಕೇರುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಗೆಬೆರ್ಹಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರದರ್ಶಿಸಿದ ಅಮೋಘ ಆಲ್‌ರೌಂಡರ್ ಪ್ರದರ್ಶನವು ಜಾನ್ಸೆನ್ ಅವರಿಗೆ ಈ ಐತಿಹಾಸಿಕ ಸಾಧನೆ ತಂದುಕೊಟ್ಟಿದೆ. ಪಂದ್ಯದಲ್ಲಿ ಭರ್ಜರಿ 85 ರನ್ ಗಳಿಸಿದ ಅವರು, ಪ್ರಥಮ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾದ ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಅದ್ಭುತ ಪ್ರದರ್ಶನದ ಬಲದಿಂದ 26 ವರ್ಷದ ಮಾರ್ಕೊ ಜಾನ್ಸೆನ್ ಮೂರೂ ವಿಭಾಗಗಳಲ್ಲಿ ಭಾರಿ ಜಿಗಿತ ಕಂಡಿದ್ದಾರೆ. ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 13 ಸ್ಥಾನಗಳ ಬಡ್ತಿ ಪಡೆದು 56ನೇ ಸ್ಥಾನಕ್ಕೇರಿರುವ ಅವರು, ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ತಲುಪಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ನಾಲ್ಕು ವರ್ಷಗಳಿಂದ ಆಲ್‌ರೌಂಡರ್ ವಿಭಾಗದಲ್ಲಿ ಅಧಿಪತ್ಯ ಸಾಧಿಸಿದ್ದ ರವೀಂದ್ರ ಜಡೇಜಾ ಅವರನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿ ವಿಶ್ವದ ನಂ. 1 ಟೆಸ್ಟ್ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದ ದಿಗ್ಗಜ ಬೌಲರ್ ಡೇಲ್ ಸ್ಟೇನ್ ಅವರು ಜಾನ್ಸೆನ್ ಅವರನ್ನು "ವಿಶ್ವದ ಅತ್ಯುತ್ತಮ ಕ್ರಿಕೆಟಿಗ" ಎಂದು ಬಣ್ಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನು ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿ ನಂ. 1 ಪಟ್ಟವನ್ನು ಮರಳಿ ಪಡೆದಿದ್ದಾರೆ. ಐರ್ಲೆಂಡ್ ಪ್ರವಾಸದ ಅದ್ಭುತ ಪ್ರದರ್ಶನದಿಂದ ಕಳೆದ ಜುಲೈನಲ್ಲಿ ಇಶಾನ್ ಕಿಶನ್ ಅಗ್ರಸ್ಥಾನಕ್ಕೇರಿದ್ದರು. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿ 2025 ರ ಜುಲೈನಲ್ಲಿ ಮೊದಲ ಬಾರಿಗೆ ನಂ. 1 ಪಟ್ಟಕ್ಕೇರಿದ್ದ ಅಭಿಷೇಕ್ ಶರ್ಮಾ, ಈಗ ತಮ್ಮ ಸ್ಫೋಟಕ ಬ್ಯಾಟಿಂಗ್ ಫಾರ್ಮ್ ಮೂಲಕ ಮತ್ತೆ ಜಾಗತಿಕ ಶ್ರೇಯಾಂಕದ ತುತ್ತತುದಿಗೆ ತಲುಪಿದ್ದಾರೆ.

ಈ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಇನ್ನು ಕೆಲವು ಪ್ರಮುಖ ಆಟಗಾರರು ಕೂಡ ಪ್ರಗತಿ ಸಾಧಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ, ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ 4 ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ಏಕದಿನ (ODI) ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ಶುಭಮಾನ್ ಗಿಲ್ ವಿಶ್ವದ ನಂ. 1 ಬ್ಯಾಟರ್ ಆಗಿ ತಮ್ಮ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಹಾಗೂ ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ, (ಏಜೆನ್ಸೀಸ್​).