ಕ್ರೀಡೆ

ಏಷ್ಯಾಕಪ್ ಟ್ರೋಫಿ​ ವಿವಾದ ಬಗೆಹರಿಸಲು ಐಸಿಸಿ ನೆರವು; ಬಿಕ್ಕಟ್ಟು ಪರಿಹಾರಕ್ಕೆ ಸಮಿತಿ ರಚನೆ ಭರವಸೆ

ದುಬೈ: ಏಷ್ಯಾಕಪ್​ ಟಿ20 ಚಾಂಪಿಯನ್​ ಭಾರತ ತಂಡಕ್ಕೆ ಟ್ರೋಫಿ ವಿತರಿಸದ ವಿವಾದವನ್ನು ಬಿಸಿಸಿಐ ಶುಕ್ರವಾರ, ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸಿತು. ಈ ಬಿಕ್ಕಟ್ಟು ಪರಿಹರಿಸಲು ನೆರವಾಗುವ ಭರವಸೆ ನೀಡಿರುವ ಐಸಿಸಿ, ಅಗತ್ಯಬಿದ್ದರೆ ಇದೇ ಕಾರ್ಯಕ್ಕಾಗಿ ಸಮಿತಿಯೊಂದನ್ನು ರಚಿಸುವುದಾಗಿಯೂ ತಿಳಿಸಿದೆ.

ಸೆಪ್ಟೆಂಬರ್​ 28ಕ್ಕೆ ಫೈನಲ್​ ಪಂದ್ಯದ ನಂತರ ಸೂರ್ಯಕುಮಾರ್​ ಬಳಗಕ್ಕೆ ಟ್ರೋಫಿ ನೀಡದೆ, ಸ್ಟೇಡಿಯಂನಿಂದ ಪಲಾಯನ ಮಾಡಿದ್ದ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಮತ್ತು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಮೊಹ್ಸಿನ್​ ನಖ್ವಿ ಶುಕ್ರವಾರ ಮಧ್ಯಾಹ್ನದ ನಂತರ ಐಸಿಸಿ ಸಭೆಗೆ ಹಾಜರಾದ ಬೆನ್ನಲ್ಲೇ ಬಿಸಿಸಿಐ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕಾರ್ಯದರ್ಶಿ ದೇವಜಿತ್​ ಸೈಕಿಯಾ, ಏಷ್ಯಾಕಪ್​ ಟ್ರೋಫಿ ವಿವಾದವನ್ನು ಪ್ರಸ್ತಾಪಿಸಿದರು.

ಭಾರತಕ್ಕೆ ಅರ್ಹವಾಗಿ ಸಲ್ಲಬೇಕಾದ ಟ್ರೋಫಿಯನ್ನು ನಖ್ವಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ದೂರಿದರು. ಆದರೆ ಈ ಬಗ್ಗೆ ಕೋಪದ ವಾತಾವರಣದ ಬದಲಾಗಿ ಸೌಹಾರ್ದಯುತವಾಗಿಯೇ ಚರ್ಚೆ ನಡೆಯಿತು. ಇದರಿಂದ ಈ ವಿವಾದ ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆ ಮೂಡಿದೆ.