ಅಹಮದಾಬಾದ್: ಅಂತಾರಾಷ್ಟ್ರೀಯ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಸಮಯ ಪಾಲನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಟ್ಟುನಿಟ್ಟಿನ "ಸ್ಟಾಪ್ ಕ್ಲಾಕ್' ನಿಯಮವನ್ನು ಜಾರಿಗೆ ತಂದಿದೆ. ಇದರನ್ವಯ ಬೌಲಿಂಗ್ ಮಾಡುವ ತಂಡ ಇನಿಂಗ್ಸ್ ಒಂದರಲ್ಲಿ ಮುಂದಿನ ಓವರ್ ಆರಂಭಿಸಲು 60 ಸೆಕೆಂಡ್ ಸಮಯದ ಮಿತಿಯನ್ನು 3 ಬಾರಿ ಮೀರಿದರೆ 5 ರನ್ಗಳ ದಂಡ ಶಿಕ್ಷೆಗೆ ಗುರಿಯಾಗಲಿದೆ. ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಮುಂದಿನ ಡಿಸೆಂಬರ್ನಿಂದ 2024ರ ಏಪ್ರಿಲ್ ತನಕ ಪ್ರಾಯೋಗಿಕವಾಗಿ ಈ ನಿಯಮ ಜಾರಿಗೆ ಬರಲಿದೆ.
ವಿಶ್ವಕಪ್ ಮುಕ್ತಾಯದ ಬಳಿಕ ಅಹಮದಾಬಾದ್ನಲ್ಲೇ ಮಂಗಳವಾರ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಗವನ್ನು ಸುಧಾರಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಡಿಸೆಂಬರ್ನಿಂದ ಏಕದಿನ ಮತ್ತು ಟಿ20 ಪಂದ್ಯಗಳ ವೇಳೆ ಓವರ್ ನಡುವೆ ಸ್ಟಾಪ್ ಕ್ಲಾಕ್ ಬಳಕೆಯಾಗಲಿದೆ. ಒಂದು ಓವರ್ ಮುಗಿದ ಬಳಿಕ ಒಂದು ನಿಮಿಷದೊಳಗೆ ಮುಂದಿನ ಓವರ್ ಶುರುವಾಗಬೇಕು. ಇನಿಂಗ್ಸ್ವೊಂದರಲ್ಲಿ 60 ಸೆಕೆಂಡ್ನೊಳಗೆ ಮುಂದಿನ ಓವರ್ ಆರಂಭಿಸಲು 3 ಬಾರಿ ವಿಫಲವಾದರೆ, ಬೌಲಿಂಗ್ ತಂಡ 5 ರನ್ಗಳ ಪೆನಾಲ್ಟಿ ತೆರಬೇಕಾಗುತ್ತದೆ. 6 ತಿಂಗಳ ಟ್ರಯಲ್ ಬಳಿಕ ಈ ನಿಯಮದ ಬಗ್ಗೆ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.
ಓವರ್ರೇಟ್ ಸುಧಾರಣೆಗೆ ಐಸಿಸಿ 2022ರಲ್ಲೇ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಕೆಲ ನಿಯಮಗಳನ್ನು ತಂದಿತ್ತು. ಅದರನ್ವಯ ಫೀಲ್ಡಿಂಗ್ ತಂಡ ಆ ಇನಿಂಗ್ಸ್ಗೆ ನೀಡಲಾದ ನಿಗದಿತ ಸಮಯದೊಳಗೆ ಅಂತಿಮ ಓವರ್ ಆರಂಭಿಸದಿದ್ದರೆ, ಉಳಿದ ಎಸೆತ-ಓವರ್ ಪೂರ್ತಿ 30 ಯಾರ್ಡ್ ಸರ್ಕಲ್ ಹೊರಗಿನ ಓರ್ವ ಫೀಲ್ಡರ್ ಕಡಿತಗೊಳಿಸಲಾಗುತ್ತದೆ. ಇದೀಗ "ಸ್ಟಾಪ್ ಕ್ಲಾಕ್' ಮೂಲಕ ಸಮಯ ಪಾಲನೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ.
ಬ್ಯಾಟರ್ಗಳ ಸಮಯ ಪಾಲನೆಗಾಗಿ ಈಗಾಗಲೆ ಟೈಮ್ಡ್ ಔಟ್ ನಿಯಮವಿದೆ. ಇದರನ್ವಯ ಬ್ಯಾಟರ್ ಓರ್ವ ಔಟಾದ ಬಳಿಕ ಹೊಸ ಬ್ಯಾಟರ್ ಬ್ಯಾಟಿಂಗ್ಗೆ ಸಿದ್ಧಗೊಳ್ಳಲು 2 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಇತ್ತೀಚೆಗೆ ವಿಶ್ವಕಪ್ನಲ್ಲಿ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಇದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡ ಕಾರಣ "ಟೈಮ್ಡ್ ಔಟ್' ಆಗಿದ್ದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬ್ಯಾಟರ್ ಓರ್ವ ಈ ರೀತಿಯಾಗಿ ಔಟಾದ ಮೊದಲ ದೃಷ್ಟಾಂತವೂ ಆಗಿತ್ತು.
ಟೆನಿಸ್ ಶಾಟ್ ಕ್ಲಾಕ್ ಸ್ಫೂರ್ತಿ!
ಕ್ರಿಕೆಟ್ನಲ್ಲಿ ಓವರ್ ನಡುವೆ ಜಾರಿಗೆ ತರಲಾಗಿರುವ "ಸ್ಟಾಪ್ ಕ್ಲಾಕ್' ನಿಯಮಕ್ಕೆ ಟೆನಿಸ್ನಲ್ಲಿರುವ "ಶಾಟ್ ಕ್ಲಾಕ್' ನಿಯಮ ಸ್ಫೂರ್ತಿಯಾಗಿದೆ. ಟೆನಿಸ್ನಲ್ಲಿ ಆಟಗಾರರು ಅಂಕಗಳ ನಡುವೆ ಮುಂದಿನ ಸರ್ವ್ಗೆ ಸಿದ್ಧರಾಗಲು 25 ಸೆಕೆಂಡ್ಗಳ "ಶಾಟ್ ಕ್ಲಾಕ್' ಇರುತ್ತದೆ. ಕ್ರಿಕೆಟ್ನಲ್ಲೂ ಓವರ್ರೇಟ್ ಸುಧಾರಣೆಗೆ ಇಂಥ ನಿಯಮದ ಅಗತ್ಯವಿದೆ ಎಂದು ಎಂಸಿಸಿಯ ವಿಶ್ವ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿತ್ತು.