ನವದೆಹಲಿ: ಮುಂದಿನ ವರ್ಷದ 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 57 ದಿನಗಳಷ್ಟೇ ಬಾಕಿ ಉಳಿದಿರುವಾಗ ಕೊನೆಗೂ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. "ಮಿನಿ ವಿಶ್ವಕಪ್' ಖ್ಯಾತಿಯ ಏಕದಿನ ಕ್ರಿಕೆಟ್ ಟೂರ್ನಿಯ ಆತಿಥ್ಯಕ್ಕೆ ಸಂಬಂಧಿಸಿದ ಬಿಕ್ಕಟ್ಟನ್ನು ಕೆಲದಿನಗಳ ಹಿಂದಷ್ಟೇ ಬಗೆಹರಿಸಿದ್ದ ಐಸಿಸಿ, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸುವುದಾಗಿ ಘೋಷಿಸಿತ್ತು. ಮಂಗಳವಾರ ಕೊನೆಗೂ ಅಧಿಕೃತವಾಗಿ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಭಾರತ&ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ 2025ರ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿದೆ.
ಫೆಬ್ರವರಿ 19ರಂದು ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಮರುದಿನ ಅಂದರೆ ಫೆಬ್ರವರಿ 20ರಂದು ಭಾರತ ತಂಡ ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ನಂತರ ಮಾರ್ಚ್ 2ರಂದು ದುಬೈನಲ್ಲೇ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ತನ್ನ 3ನೇ ಹಾಗೂ ಕೊನೇ ಲೀಗ್ ಪಂದ್ಯವನ್ನು ಆಡಲಿದೆ.
19 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್ ಮಾರ್ಚ್ 2ರಂದು ಲಾಹೋರ್ನಲ್ಲಿ ನಿಗದಿಯಾಗಿದೆ.
2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಅಗ್ರ 8 ಸ್ಥಾನ ಪಡೆದ ತಂಡಗಳು ಟೂರ್ನಿಗೆ ನೇರಅರ್ಹತೆ ಪಡೆದಿವೆ. ಹೀಗಾಗಿ ಆ ವಿಶ್ವಕಪ್ನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಶ್ರೀಲಂಕಾ ಮತ್ತು ಆ ವಿಶ್ವಕಪ್ನಲ್ಲೇ ಆಡಿರದ ವೆಸ್ಟ್ ಇಂಡೀಸ್ ತಂಡಗಳು ಅರ್ಹತೆ ಪಡೆದಿಲ್ಲ. ಲಂಕಾ, ವಿಂಡೀಸ್ ಎರಡೂ ಟೂರ್ನಿಯ ಮಾಜಿ ಚಾಂಪಿಯನ್ ತಂಡಗಳಾಗಿವೆ. ಅಫ್ಘಾನಿಸ್ತಾನ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದೆ. 2017ರಲ್ಲಿ ಕೊನೆಯದಾಗಿ ಈ ಟೂರ್ನಿ ನಡೆದಿತ್ತು ಮತ್ತು 8 ವರ್ಷಗಳ ಬಳಿಕ ಮತ್ತೆ ನಡೆಯುತ್ತಿದೆ.
ಇದು 1996ರ ಏಕದಿನ ವಿಶ್ವಕಪ್ ಬಳಿಕ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಮೊದಲ ಐಸಿಸಿ ಟೂರ್ನಿಯಾಗಿದೆ. 2027ರವರೆಗೆ ಭಾರತದಲ್ಲಿ ನಿಗದಿಯಾಗಿರುವ ಐಸಿಸಿ ಟೂರ್ನಿಗಳನ್ನೂ ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಸೂತ್ರದ ಅನ್ವಯ, ಪಾಕಿಸ್ತಾನ ಈ ಬಾರಿ ಆತಿಥ್ಯವನ್ನು ಉಳಿಸಿಕೊಂಡಿದೆ. ಇದರನ್ವಯ ಈ ಬಾರಿ ದುಬೈ ಅನ್ನು ತಟಸ್ಥ ತಾಣವಾಗಿ ಆರಿಸಲಾಗಿದೆ.
ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿೈನಲ್ಗೇರಲಿವೆ.
*ಗುಂಪುಗಳು
ಎ: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ
ಬಿ: ದಣ ಆಫ್ರಿಕಾ, ಆಸ್ಟ್ರೆಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್
ಲಾಹೋರ್/ದುಬೈನಲ್ಲಿ ಫೈನಲ್
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಮಾರ್ಚ್ 9ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಆದರೆ ಭಾರತ ತಂಡ ಫೈನಲ್ಗೆ ಅರ್ಹತೆ ಪಡೆದರೆ ಈ ಪಂದ್ಯ ದುಬೈನಲ್ಲಿ ನಡೆಯಲಿದೆ. ಮಾರ್ಚ್ 10 ಫೈನಲ್ಗೆ ಮೀಸಲು ದಿನವಾಗಿದೆ. 2 ಸೆಮಿಫೈನಲ್ ಪಂದ್ಯಗಳಿಗೂ ಮೀಸಲು ದಿನವಿದೆ. ಆದರೆ ಲೀಗ್ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಭಾರತ ತಂಡ ಸೆಮಿಫೈನಲ್ಗೇರಿದರೆ ದುಬೈನಲ್ಲಿ ಮತ್ತು ಪಾಕಿಸ್ತಾನ ಸೆಮಿಫೈನಲ್ಗೇರಿದರೆ ಲಾಹೋರ್ನಲ್ಲಿ ಆಡಲಿದೆ.
ಚಾಂಪಿಯನ್ಸ್ ಟ್ರೋಫಿ-2025 ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ
ಫೆ.19 ಪಾಕಿಸ್ತಾನ-ನ್ಯೂಜಿಲೆಂಡ್ ಕರಾಚಿ
ಫೆ. 20 ಬಾಂಗ್ಲಾದೇಶ-ಭಾರತ ದುಬೈ
ಫೆ. 21 ಅಫ್ಘಾನಿಸ್ತಾನ-ದ. ಆಫ್ರಿಕಾ ಕರಾಚಿ
ಫೆ. 22 ಆಸ್ಟ್ರೆಲಿಯಾ-ಇಂಗ್ಲೆಂಡ್ ಲಾಹೋರ್
ಫೆ. 23 ಭಾರತ-ಪಾಕಿಸ್ತಾನ ದುಬೈ
ಫೆ. 24 ಬಾಂಗ್ಲಾದೇಶ-ನ್ಯೂಜಿಲೆಂಡ್ ರಾವಲ್ಪಿಂಡಿ
ಫೆ. 25 ಅಸ್ಟ್ರೆಲಿಯಾ-ದ. ಆಫ್ರಿಕಾ ರಾವಲ್ಪಿಂಡಿ
ಫೆ. 26 ಅಫ್ಘಾನಿಸ್ತಾನ-ಇಂಗ್ಲೆಂಡ್ ಲಾಹೋರ್
ಫೆ. 27 ಪಾಕಿಸ್ತಾನ-ಬಾಂಗ್ಲಾದೇಶ ರಾವಲ್ಪಿಂಡಿ
ಫೆ. 28 ಅಫ್ಘಾನಿಸ್ತಾನ-ಆಸ್ಟ್ರೆಲಿಯಾ ಲಾಹೋರ್
ಮಾ. 1 ದಣ ಆಫ್ರಿಕಾ-ಇಂಗ್ಲೆಂಡ್ ಕರಾಚಿ
ಮಾ. 2 ಭಾರತ-ನ್ಯೂಜಿಲೆಂಡ್ ದುಬೈ
ಮಾ. 4 ಸೆಮಿಫೈನಲ್-1 ದುಬೈ
ಮಾ. 5 ಸೆಮಿಫೈನಲ್-2 ಲಾಹೋರ್
ಮಾ. 9 ಫೈನಲ್ -ದುಬೈ/ಲಾಹೋರ್
ಎಲ್ಲ ಪಂದ್ಯ ಆರಂಭ: ಮಧ್ಯಾಹ್ನ 2.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್