ಕ್ರೀಡೆ

ಪಾಕ್​ ವಿರುದ್ಧದ ಗೆಲುವು ಆರ್ಮಿಗೆ ಅರ್ಪಣೆ: ಕ್ಯಾಪ್ಟನ್​ ಸೂರ್ಯಕುಮಾರ್​ಗೆ ದಂಡ ವಿಧಿಸಿದ ICC!

ಸೆ.14ರಂದು ಪಾಕ್​ ವಿರುದ್ಧ ಭಾರತ ಅಮೋಘ ಜಯಗಳಿಸಿದ ನಂತರ ಭಾರತ ತಂಡದ ಕ್ಯಾಪ್ಟನ್​​ ಸೂರ್ಯಕುಮಾರ್ ಯಾದವ್​​ ಈ ಗೆಲುವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ಅರ್ಪಿಸಿದ್ದಾಗಿ ಹೇಳಿದ್ದರು. ಈ ಹೇಳಿಕೆಗಾಗಿ ಅಂತರಾಷ್ಟ್ರೀಯ ಕ್ರಿಕೆಟ್​​ ಮಂಡಳಿ(ICC), ಇದೀಗ ಪಂದ್ಯ ಶುಲ್ಕದ 30 ಪ್ರತಿ ಶತದಷ್ಟು ದಂಡ ವಿಧಿಸಿದೆ.

ಇನ್ನೂ ಕ್ಯಾಪ್ಟನ್​ ಸೂರ್ಯಕುಮಾರ್​ಗೆ ವಿಧಿಸಲಾದ ದಂಡದ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಭಾನುವಾರದ ಫೈನಲ್ ಪಂದ್ಯಕ್ಕೆ ಎರಡು ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ದೂರು ಸಲ್ಲಿಸಿದ ನಂತರ, ಭಾರತದ ನಾಯಕ ಸೂರ್ಯಕುಮಾರ್ ಹೇಳಿಕೆಗಳು ರಾಜಕೀಯ ಉದ್ದೇಶಗಳನ್ನು ಹೊಂದಿವೆ ಎಂದು ಭಾವಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿಚಾರಣೆಯನ್ನು ಕರೆಯಲಾಗಿತ್ತು. ಇನ್ನು ಮುಂದೆ ಪಂದ್ಯಾವಳಿಯಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡದಂತೆ ಸೂರ್ಯಕುಮಾರ್‌ಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​)