ನ್ಯೂಯಾರ್ಕ್: ಜೂನ್ 09ರಂದು ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕ್ ನಡುವಿನ ಹೈವೋಲ್ಟೇಜ್ ಕದನವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಒಂದೆಡೆ ಗೆಲುವಿನ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಸಜ್ಜಾಗಿದ್ದರೆ ಇತ್ತ ಕ್ರಿಕೆಟ್ ಶಿಶುವಿನ ಎದುರು ಸೋಲಿನೊಂದಿಗೆ ಅಭಿಯಾನ ಶುರು ಮಾಡಿರುವ ಪಾಕಿಸ್ತಾನ ತನ್ನ ಸೂಪರ್-8 ಹಾದಿಯನ್ನು ದುರ್ಗಮವಾಗಿಸಿಕೊಂಡಿದೆ.
ಇನ್ನೂ ಭಾರತ ಹಾಗೂ ಪಾಕ್ ಪಂದ್ಯದ ಮೇಲೆ ಇಡೀ ವಿಶ್ವವೇ ಕಣ್ಣಿಟ್ಟಿದ್ದು, ಇದಕ್ಕೂ ಮುನ್ನ ಐಸಿಸಿ ಮಹತ್ವದ ನಿರ್ಧಾರ ಒಂದನ್ನು ಪ್ರಕಟಿಸಿದೆ. ಭಾರತ ಹಾಗೂ ಪಾಕ್ ನಡುವಿನ ಪಂದ್ಯಕ್ಕೂ ಮುನ್ನ ಐಸಿಸಿ ತನ್ನ ನಿರ್ಧಾರವನ್ನು ಪ್ರಕಟಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಇನ್ನೂ ಈ ಬಾರಿಯ ಟೂರ್ನಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ವಿಚಾರ ಎಂದರೆ ಅದು ಪಿಚ್ ಎಂದು ಹೇಳಬಹುದಾಗಿದೆ. ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈವರೆಗೆ ಕೆಲವೇ ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡಗಳು 100ಕ್ಕಿಂತ ಕಡಿಮೆ ರನ್ ಗಳಿಸಿದ್ದು, ವಿಕೆಟ್‌ನಿಂದ ಹೆಚ್ಚುವರಿ ಬೌನ್ಸ್ ಮತ್ತು ಸ್ವಿಂಗ್ ಎರಡನೇ ಇನ್ನಿಂಗ್ಸ್‌ನಲ್ಲಿ ಆಡುತ್ತಿರುವ ತಂಡಗಳನ್ನು ತೊಂದರೆಗೀಡು ಮಾಡಿದೆ. ಭಾರತ ಹಾಗೂ ಪಾಕ್ ನಡುವಿನ ಪಂದ್ಯದಲ್ಲಿ ಇದನ್ನು ನಿರೀಕ್ಷಿಸಲಾಗಿದ್ದು, ಪಂದ್ಯಕ್ಕೂ ಮುನ್ನ ಐಸಿಸಿ ಪಿಚ್ ಕುರಿತಾಗಿ ನಿರ್ಧಾರ ಒಂದನ್ನು ಕೈಗೊಂಡಿದೆ.
ಈ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ 77 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 16ನೇ ಓವರ್‌ನಲ್ಲಿ ಗೆಲುವಿನ ನಗೆಬೀರಿತು. ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಐರ್ಲೆಂಡ್ ತಂಡವನ್ನು 96 ರನ್‌ಗಳಿಗೆ ಆಲೌಟ್ ಮಾಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಈ ಪಿಚ್ನಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಹೀಗಾಗಿ ಭಾರತ ಹಾಗೂ ಪಾಕ್ ಪಂದ್ಯಕ್ಕೂ ಮುನ್ನ ಐಸಿಸಿ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ಭಾರತ ಹಾಗೂ ಪಾಕ್ ಪಂದ್ಯಕ್ಕೂ ಮುನ್ನ ಐಸಿಸಿ ಪಿಚ್ ಬಗ್ಗೆ ದೊಡ್ಡ ಹೇಳಿಕೆ ನೀಡಿದೆ. ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್‌ಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಒಪ್ಪಿಕೊಂಡಿರುವ ಐಸಿಸಿ, ಮುಂಬರುವ ಪಂದ್ಯಗಳಿಗೆ ಈ ಪಿಚ್‌ಗಳನ್ನು ಸುಧಾರಿಸುವ ಭರವಸೆ ನೀಡಿದೆ. ಏಕೆಂದರೆ ಪಂದ್ಯದ ಫಲಿತಾಂಶದಲ್ಲಿ ಪಿಚ್ ದೊಡ್ಡ ಪಾತ್ರ ವಹಿಸುವ ಆತಂಕ ಎದುರಾಗಿದೆ. ಈ ದೊಡ್ಡ ಪಂದ್ಯಕ್ಕೂ ಮುನ್ನ ಐಸಿಸಿ ಹೇಳಿಕೆ ನೀಡಿದ್ದು, ಈ ಕ್ರೀಡಾಂಗಣದ ಪಿಚ್ ನಾವೆಲ್ಲರೂ ಬಯಸಿದ ರೀತಿಯಲ್ಲಿ ವರ್ತಿಸುತ್ತಿಲ್ಲ. ಹೀಗಾಗಿ ಉಳಿದ ಪಂದ್ಯಗಳಿಗೆ ಉತ್ತಮ ಪಿಚ್‌ಗಳನ್ನು ಒದಗಿಸಲು ವಿಶ್ವ ದರ್ಜೆಯ ಮೈದಾನ ಸಿಬ್ಬಂದಿಗಳ ತಂಡ ಶ್ರಮಿಸುತ್ತಿದೆ ಎಂದಿದೆ. ಇದರರ್ಥ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಪಿಚ್ನಲ್ಲಿ ಬದಲಾವಣೆಯಾಗಿರುವುದನ್ನು ನಾವು ನೋಡಬಹುದಾಗಿದೆ.