ಕರಾಚಿ: ವಿಶ್ವದ ಅಗ್ರ 8 ತಂಡಗಳ ನಡುವಿನ ಹಣಾಹಣಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 8 ವರ್ಷಗಳ ಬಳಿಕ ಬುಧವಾರ ಮರುಚಾಲನೆ ದೊರೆಯಲಿದೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದೆ. ಭಾರತ ತಂಡ ಗುರುವಾರ ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. "ಮಿನಿ ವಿಶ್ವಕಪ್' ಖ್ಯಾತಿಯ ಈ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವುದು ವಿಶ್ವಕಪ್ಗಿಂತಲೂ ಕಠಿಣ ಸವಾಲು. ಇದು ಬಲಿಷ್ಠ ತಂಡಗಳಷ್ಟೇ ಆಡುವ ಟೂರ್ನಿ ಆಗಿರುವುದು ಇದಕ್ಕೆ ಪ್ರಮುಖ ಕಾರಣ. ಟಿ20 ಕ್ರಿಕೆಟ್ ಅಬ್ಬರದ ನಡುವೆ ಏಕದಿನ ಕ್ರಿಕೆಟ್ ತನ್ನ ಮಹತ್ವ, ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲೂ ಈ ಟೂರ್ನಿ ನಿರ್ಣಾಯಕ ಪಾತ್ರ ವಹಿಸಲಿದೆ. ವಿಶ್ವದ ಕೆಲ ಪ್ರಮುಖ ಬೌಲರ್ಗಳ ಗೈರು ಟೂರ್ನಿಯ ಒಟ್ಟಾರೆ ಸ್ಪರ್ಧಾತ್ಮಕತೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದ್ದರೂ, ಸ್ಟಾರ್ ಬ್ಯಾಟರ್ಗಳ ಅಬ್ಬರ ಟೂರ್ನಿಯ ಆಕರ್ಷಣೆ ಹೆಚ್ಚಿಸುವ ನಿರೀಕ್ಷೆ ಇದೆ.
ಆವೃತ್ತಿ: 9
ತಂಡ: 8
ಪಂದ್ಯ: 15
ದಿನ: 19
ತಾಣ: 4
ಹೈಬ್ರಿಡ್ ಮಾದರಿ
ಇದು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಮೊದಲ ಐಸಿಸಿ ಟೂರ್ನಿ ಎನಿಸಿದೆ. ಟೂರ್ನಿಯ 7 ತಂಡಗಳು ಪಾಕ್ ನೆಲದಲ್ಲಿ ಆಡಿದರೆ, ಭದ್ರತಾ ಕಳವಳದಿಂದಾಗಿ ಭಾರತ ತಂಡ ಮಾತ್ರ ತನ್ನ ಪಂದ್ಯಗಳನ್ನು ಯುಎಇಯ ದುಬೈನಲ್ಲಿ ಆಡಲಿದೆ.
ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ನಲ್ಲಿ ತಲಾ 3 ಪಂದ್ಯ ಆಡಿದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿೈನಲ್ಗೇರಲಿವೆ.
ಸ್ಟಾರ್ಗಳ ಕೊನೇ ಆಟ?
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಬಾಬರ್ ಅಜಮ್, ಜೋ ರೂಟ್, ಕೇನ್ ವಿಲಿಯಮ್ಸನ್, ಮುಶ್ಫಿಕರ್ ರಹೀಂ, ಮೊಹಮದ್ ನಬಿ, ಡೇವಿಡ್ ಮಿಲ್ಲರ್ರಂಥ ಸ್ಟಾರ್ ಆಟಗಾರರು ಜತೆಯಾಗಿ ಆಡುವ ಕೊನೇ ಐಸಿಸಿ ಟೂರ್ನಿ ಇದಾಗುವ ಸಾಧ್ಯತೆ ಇದೆ. ಟಿ20 ಕ್ರಿಕೆಟ್ ಪ್ರಕಾರದಿಂದ ಹೆಚ್ಚಿನ ಹಿರಿಯ ಆಟಗಾರರು ಈಗಾಗಲೆ ಹೊರಗುಳಿದಿದ್ದರೆ, ಮುಂದಿನ ಏಕದಿನ ವಿಶ್ವಕಪ್ ನಡೆಯಲಿರುವುದು 2027ರಲ್ಲಿ. ಹೀಗಾಗಿ ಅಲ್ಲಿಯವರೆಗೆ ಇವರೆಲ್ಲರೂ ಕಣದಲ್ಲಿ ಅನುಮಾನ ಉಳಿಯುವುದು ಅನುಮಾನ. ಈ ಪೈಕಿ ಕೆಲವರಿಗೆ ಇದೇ ಕೊನೇ ಐಸಿಸಿ ಟೂರ್ನಿ ಆದರೂ ಅಚ್ಚರಿ ಇಲ್ಲ.
ಎ ಗುಂಪು
ಏಷ್ಯಾದ 3 ತಂಡಗಳಿಂದ ಕೂಡಿರುವ ಎ ಗುಂಪಿನಲ್ಲಿ ರೋಚಕ ಕಾದಾಟದ ನಿರೀಕ್ಷೆ ಇದೆ. ಭಾರತ-ಪಾಕಿಸ್ತಾನ ತಂಡಗಳ ಜತೆಗೆ ನ್ಯೂಜಿಲೆಂಡ್ ಸೆಮಿಫೈನಲ್ ಹಂತಕ್ಕೇರಲು ನಿಕಟ ಪೈಪೋಟಿ ನೀಡಬಹುದು. ಬಾಂಗ್ಲಾದೇಶ ತಂಡವನ್ನೂ ಕಡೆಗಣಿಸಿದರೆ ಅಪಾಯ ಖಚಿತವೆನ್ನಬಹುದು. ಭಾರತ-ಪಾಕ್ ಮುಖಾಮುಖಿಯಲ್ಲಿ ಗೆದ್ದ ತಂಡಕ್ಕೆ ಸೆಮೀಸ್ ಅವಕಾಶ ಹೆಚ್ಚಲಿದೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ತ್ರಿಕೋನ ಸರಣಿ ಗೆದ್ದು ಬೀಗಿರುವ ಕಿವೀಸ್ ತಂಡ ಹೆಚ್ಚಿನ ಆತ್ಮವಿಶ್ವಾಸ ಹೊಂದಿದೆ.
ಭಾರತ
ಐಸಿಸಿ ರ್ಯಾಂಕ್: 1
ನಾಯಕ: ರೋಹಿತ್ ಶರ್ಮ
ಗೇಮ್ ಚೇಂಜರ್ಸ್: ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮೊಹಮದ್ ಶಮಿ, ಶುಭಮಾನ್ ಗಿಲ್, ವರುಣ್ ಚಕ್ರವರ್ತಿ.
ಟೂರ್ನಿ ಇತಿಹಾಸದ ಬಲಿಷ್ಠ ದಾಖಲೆಯನ್ನು ಕಾಯ್ದುಕೊಳ್ಳುವ ಉತ್ಸಾಹದೊಂದಿಗೆ ಭಾರತ ತಂಡ ಕಣಕ್ಕಿಳಿಯಲಿದೆ. 2023ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಸತತ 10 ಪಂದ್ಯ ಗೆದ್ದು ಬೀಗಿದ್ದ ತಂಡದ ಬಹುತೇಕ ಆಟಗಾರರು ಈಗಿನ ತಂಡದಲ್ಲೂ ಇದ್ದಾರೆ. ಸ್ಟಾರ್ ಬ್ಯಾಟರ್ಗಳಾದ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ಲಯಕ್ಕೆ ಮರಳಿರುವುದು ವಿಶ್ವಾಸ ಹೆಚ್ಚಿಸಿದೆ. ಶುಭಮಾನ್ ಗಿಲ್, ಶ್ರೇಯಸ್ ಅಯ್ಯರ್ ಸ್ಥಾನ ತುಂಬಬೇಕಿದೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗೈರು ತಂಡದ ಪ್ರಮುಖ ಹಿನ್ನಡೆ ಎನಿಸಿದೆ. ಮೊಹಮದ್ ಶಮಿ ಮತ್ತೆ ಫಿಟ್ ಆಗಿರುವುದು ಬೌಲಿಂಗ್ ವಿಭಾಗಕ್ಕೆ ಅನುಭವದ ಬಲ ತುಂಬಿದೆ. ಕಳೆದ ವರ್ಷದ ಟಿ20 ವಿಶ್ವಕಪ್ನಂತೆ ಸ್ಪಿನ್ನರ್ ಸ್ಟ್ರಾಟಜಿ ಮುಂದುವರಿಸಿರುವ ಭಾರತ, ಐವರು ಸ್ಪಿನ್ನರ್ಗಳನ್ನು ದುಬೈಗೆ ಕರೆದೊಯ್ದಿದ್ದು, ಇದು ಪ್ಲಸ್ ಅಥವಾ ಮೈನಸ್ ಎರಡೂ ಆಗಬಹುದು. ಮಧ್ಯಮ ಸರದಿಯಲ್ಲಿ ಹೆಚ್ಚಿನ ಆಲ್ರೌಂಡರ್ಗಳು ತುಂಬಿದ್ದು, ಫಿನಿಷರ್ ಪಾತ್ರವನ್ನು ಯಾರು ನಿರ್ವಹಿಸುವರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್-ರಿಷಭ್ ಪಂತ್ ನಡುವಿನ ಆರೋಗ್ಯಕರ ಪೈಪೋಟಿ ತಂಡಕ್ಕೆ ಲಾಭ ನೀಡಬೇಕಿದೆ.
ಪಾಕಿಸ್ತಾನ
ಐಸಿಸಿ ರ್ಯಾಂಕ್: 3
ನಾಯಕ: ಮೊಹಮದ್ ರಿಜ್ವಾನ್
ಗೇಮ್ ಚೇಂಜರ್ಸ್: ಬಾಬರ್ ಅಜಮ್, ಶಹೀನ್ ಷಾ ಅಫ್ರಿದಿ, ಖರ್ ಜಮಾನ್, ಹೀಮ್ ಅಶ್ರ್, ಹ್ಯಾರಿಸ್ ರೌಫ್.
ಆತಿಥೇಯ ಮತ್ತು ಹಾಲಿ ಚಾಂಪಿಯನ್ ತಂಡವಾಗಿ ಕಣಕ್ಕಿಳಿಯುತ್ತಿರುವ ಪಾಕಿಸ್ತಾನ ತಂಡದ ಮೇಲೆ ಅವಳಿ ಭಾರವಿದೆ. ಜತೆಗೆ ಮೊಹಮದ್ ರಿಜ್ವಾನ್ ಸಾರಥ್ಯದಲ್ಲಿ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಆಡುವ ಸವಾಲು ಇದೆ. 8 ವರ್ಷಗಳ ಹಿಂದೆ ಟ್ರೋಫಿ ಗೆದ್ದ ತಂಡದಲ್ಲಿದ್ದ ಇಬ್ಬರು ಆಟಗಾರರಷ್ಟೇ (ಬಾಬರ್, ಫಖರ್) ಈಗಿನ ತಂಡದಲ್ಲೂ ಇದ್ದು, ಈ ಬಾರಿ ತವರಿನ ಲಾಭವನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಲಿದೆ ಎಂಬುದು ಅದರ ಯಶಸ್ಸನ್ನು ನಿರ್ಧರಿಸಲಿದೆ.
ನ್ಯೂಜಿಲೆಂಡ್
ಐಸಿಸಿ ರ್ಯಾಂಕ್: 4
ನಾಯಕ: ಮಿಚೆಲ್ ಸ್ಯಾಂಟ್ನರ್
ಗೇಮ್ ಚೇಂಜರ್ಸ್: ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಡೆರಿಲ್ ಮಿಚೆಲ್, ವಿಲ್ ಓರೌರ್ಕಿ.
ಇತ್ತೀಚೆಗೆ ಏಷ್ಯಾದಲ್ಲೇ (ಶ್ರೀಲಂಕಾ, ಪಾಕ್) ಸತತ 3 ಸೀಮಿತ ಓವರ್ ಕ್ರಿಕೆಟ್ ಸರಣಿಗಳನ್ನು ಗೆದ್ದಿರುವ ನ್ಯೂಜಿಲೆಂಡ್ ಭರ್ಜರಿ ಾಮ್ರ್ನೊಂದಿಗೆ ಟೂರ್ನಿಯನ್ನು ಪ್ರವೇಶಿಸುತ್ತಿದೆ. 2023ರ ಏಕದಿನ ವಿಶ್ವಕಪ್ನಲ್ಲಿ ಮಿಂಚಿದ್ದ ರಚಿನ್ ರವೀಂದ್ರ, ಡೆವೊನ್ ಕಾನ್ವೇ, ಡೆರಿಲ್ ಮಿಚೆಲ್ ಅವರನ್ನೇ ತಂಡ ಮತ್ತೆ ನೆಚ್ಚಿಕೊಂಡಿದೆ. ನಾಯಕ ಸ್ಯಾಂಟ್ನರ್ ಸಾರಥ್ಯದಲ್ಲಿ ಸ್ಪಿನ್ ವಿಭಾಗ ವೈವಿಧ್ಯತೆಯಿಂದ ಕೂಡಿದ್ದರೂ, ವೇಗದ ಬೌಲಿಂಗ್ ವಿಭಾಗ ಅನನುಭವಿಗಳಿಂದ ಕೂಡಿದೆ. 2000ರಲ್ಲಿ ಟ್ರೋಫಿ ಗೆದ್ದಿರುವುದು ತಂಡಕ್ಕೆ ಸ್ಫೂರ್ತಿ ತುಂಬಲಿದೆ.
ಬಾಂಗ್ಲಾದೇಶ
ಐಸಿಸಿ ರ್ಯಾಂಕ್: 9
ನಾಯಕ: ನಜ್ಮುಲ್ ಹೊಸೈನ್ ಶಾಂಟೊ
ಗೇಮ್ ಚೇಂಜರ್ಸ್: ಮುಶ್ಫಿಕರ್ ರಹೀಂ, ಮೆಹಿದಿ ಹಸನ್ ಮಿರಾಜ್, ಮುಸ್ತಾಫಿಜುರ್ ರೆಹಮಾನ್, ನಹಿದ್ ರಾಣಾ, ಟಸ್ಕಿನ್ ಅಹ್ಮದ್.
ಸ್ಥಿತ್ಯಂತರ ಸ್ಥಿತಿಯಲ್ಲಿರುವ ಬಾಂಗ್ಲಾ ತಂಡದಿಂದ ಈ ಬಾರಿ ಹೆಚ್ಚಿನ ನಿರೀಕ್ಷೆಗಳಿಲ್ಲ. ಶಕೀಬ್, ತಮೀಮ್ ನಿರ್ಗಮನದ ಬಳಿಕ ಈ ಟೂರ್ನಿಯ ಮೂಲಕ ಮುಶ್ಫಿಕರ್, ಮಹಮದುಲ್ಲಾಗೂ ಬೀಳ್ಕೊಡುಗೆ ನೀಡುವ ಹಾದಿಯಲ್ಲಿದೆ. ಇತ್ತೀಚೆಗೆ ವಿಂಡೀಸ್, ಆಫ್ಘನ್ ಎದುರು ಸರಣಿ ಸೋತಿದೆ. ಮುಸ್ತಾಫಿಜುರ್, ಟಸ್ಕಿನ್ ಮತ್ತು ಮಿಂಚಿನ ಯುವವೇಗಿ ನಹಿದ್ ರಾಣಾ ಎದುರಾಳಿಗಳಿಗೆ ಕಂಟಕವಾದರೆ ಬಾಂಗ್ಲಾ ಯಶಸ್ಸು ಕಾಣಬಹುದು. ಬ್ಯಾಟಿಂಗ್ ವಿಭಾಗದಲ್ಲಿ ಸ್ಥಿರ ನಿರ್ವಹಣೆಯ ಅಗತ್ಯವಿದೆ.
ಬಿ ಗುಂಪು
ಅತ್ಯಂತ ಕುತೂಹಲಕಾರಿ ಎನಿಸಿರುವ ಬಿ ಗುಂಪಿನಲ್ಲಿ ಸೆಮೀಸ್ ರೇಸ್ ಇನ್ನಷ್ಟು ಸ್ಪರ್ಧಾತ್ಮಕತೆಯಿಂದ ಕೂಡಿರುವ ನಿರೀಕ್ಷೆ ಇದೆ. ಪ್ರಮುಖ ವೇಗಿಗಳ ಗೈರಿನ ನಡುವೆ ಆಸೀಸ್ ತಂಡ ಯುವ&ಅನುಭವಿಗಳಿಂದ ತುಂಬಿರುವ ದಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳಿಗೆ ಜಿದ್ದಾಜಿದ್ದಿನ ಸವಾಲು ನೀಡಬಹುದು. 2023ರ ಏಕದಿನ ವಿಶ್ವಕಪ್ ಯಶಸ್ಸಿನ ವಿಶ್ವಾಸದಲ್ಲಿರುವ ಅ್ಘಾನಿಸ್ತಾನವೂ ಗುಂಪಿನ ಕರಿಗುದುರೆಯಾಗಿದ್ದು, ಗುಂಪಿನಲ್ಲಿ ಚತುಷ್ಕೋನ ಪೈಪೋಟಿ ಏರ್ಪಡಬಹುದು.
ಆಸ್ಟ್ರೆಲಿಯಾ
ಐಸಿಸಿ ರ್ಯಾಂಕ್: 2
ನಾಯಕ: ಸ್ಟೀವನ್ ಸ್ಮಿತ್
ಗೇಮ್ ಚೇಂಜರ್ಸ್: ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್ವೆಲ್, ಆಡಂ ಜಂಪಾ, ಸೀನ್ ಅಬೋಟ್, ಮಾರ್ನಸ್ ಲಬುಶೇನ್.
ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೆಲಿಯಾ, ಚಾಂಪಿಯನ್ಸ್ ಟ್ರೋಫಿಯಲ್ಲೂ ಪ್ರಾಬಲ್ಯ ಮರುಸ್ಥಾಪಿಸುವುದು ಸುಲಭವಲ್ಲ. ಕಾಯಂ ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಸಹಿತ ಐವರು ಪ್ರಮುಖ ಆಟಗಾರರ ಗೈರು ಆಸೀಸ್ಗೆ ಹೊಡೆತ ನೀಡಿದೆ. ಬೌಲಿಂಗ್ ವಿಭಾಗ ಹೊಸಬರಿಂದ ಕೂಡಿದ್ದರೂ, ಬ್ಯಾಟಿಂಗ್ ವಿಭಾಗದಲ್ಲಿ ಟ್ರಾವಿಸ್ ಹೆಡ್, ನಾಯಕ ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್ರಂಥ ಪ್ರಮುಖ ಲಭ್ಯತೆಯ ಬಲವಿದೆ. ಇತ್ತೀಚೆಗೆ ಲಂಕಾದಲ್ಲಿ ಸರಣಿ ಸೋತಿರುವುದು ಕೂಡ ಹಿನ್ನಡೆ ತಂದಿದೆ. ಬದಲಿ ಆಟಗಾರರ ನಿರ್ವಹಣೆ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.
*ದಕ್ಷಿಣ ಆಫ್ರಿಕಾ
ಐಸಿಸಿ ರ್ಯಾಂಕ್: 6
ನಾಯಕ: ಟೆಂಬಾ ಬವುಮಾ
ಗೇಮ್ ಚೇಂಜರ್ಸ್: ಹೆನ್ರಿಕ್ ಕ್ಲಾಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಏಡನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್.
ಪ್ರತಿ ಐಸಿಸಿ ಟೂರ್ನಿಯ ಆರಂಭದಲ್ಲಿ ದಣ ಆಫ್ರಿಕಾ ತಂಡ ಬಲಿಷ್ಠವಾಗಿಯೇ ಕಾಣಿಸುತ್ತದೆ. ಆದರೆ ಮೈದಾನದಲ್ಲಿ ತನ್ನ ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸುವಲ್ಲಿ ಎಡವುದೇ ಹೆಚ್ಚು. ಇತ್ತೀಚೆಗೆ ಪಾಕ್ನಲ್ಲಿ ಆಡಿದ ತ್ರಿಕೋನ ಸರಣಿಯಲ್ಲಿ ಬ್ಯಾಟರ್ಗಳು ರನ್ಮಳೆಯನ್ನೇ ಹರಿಸಿದ್ದರು. ಆದರೆ ಬೌಲರ್ಗಳು ಕೈಕೊಟ್ಟಿದ್ದರು. ಆದರೂ, ಆಸೀಸ್, ಇಂಗ್ಲೆಂಡ್ ಸದ್ಯ ಫಾರ್ಮ್ನಲ್ಲಿಲ್ಲದೆ ಇರುವುದರಿಂದ ಬಿ ಗುಂಪಿನಲ್ಲೇ ದ. ಆಫ್ರಿಕಾವೇ ಫೇವರಿಟ್ ಎನಿಸಿದೆ. 1998ರ ಚೊಚ್ಚಲ ಆವೃತ್ತಿಯ ನಂತರ ಮತ್ತೊಂದು ಐಸಿಸಿ ಟ್ರೋಫಿ ಒಲಿಸಿಕೊಳ್ಳುವ ಹಂಬಲ ತಂಡದಲ್ಲಿದೆ.
ಇಂಗ್ಲೆಂಡ್
ಐಸಿಸಿ ರ್ಯಾಂಕ್: 7
ನಾಯಕ: ಜೋಸ್ ಬಟ್ಲರ್
ಗೇಮ್ ಚೇಂಜರ್ಸ್: ಜೋ ರೂಟ್, ಜೋಫ್ರಾ ಆರ್ಚರ್, ಹ್ಯಾರಿ ಬ್ರೂಕ್, ಆದಿಲ್ ರಶೀದ್, ಲಿಯಾಮ್ ಲಿವಿಂಗ್ಸ್ಟೋನ್.
ಇಂಗ್ಲೆಂಡ್ 2019ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಒಲಿಸಿಕೊಂಡ ಬಳಿಕ ಈ ಪ್ರಕಾರದಲ್ಲಿ ಅದರ ನಿರ್ವಹಣೆ ತೃಪ್ತಿಕರ ಎನಿಸಿಲ್ಲ. 2023ರ ಏಕದಿನ ವಿಶ್ವಕಪ್ನಲ್ಲಿ ನೀರಸ ನಿರ್ವಹಣೆ ತೋರಿತ್ತು. ಇತ್ತೀಚೆಗೆ ಭಾರತದಲ್ಲಿ ಆಡಿದ ಏಕದಿನ ಸರಣಿಯಲ್ಲೂ ವೈಟ್ವಾಷ್ ಎದುರಿಸಿತ್ತು. ತಂಡದ ಪ್ರಮುಖ ಆಟಗಾರರ ಅಸ್ಥಿರ ನಿರ್ವಹಣೆ ಇದಕ್ಕೆ ಪ್ರಮುಖ ಕಾರಣ. ಆದರೆ ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನದಲ್ಲಿ ಬಾಜ್ಬಾಲ್ ಮೂಲಕ ಯಶ ಕಂಡಿರುವ ಇಂಗ್ಲೆಂಡ್, ಈ ಬಾರಿ ಏಕದಿನದಲ್ಲೂ ಹೊಸ ಕಾರ್ಯತಂತ್ರ ಅನುಸರಿಸುವ ನಿರೀೆ ಇದೆ.
*ಅಫ್ಘಾನಿಸ್ತಾನ
ಐಸಿಸಿ ರ್ಯಾಂಕ್: 8
ನಾಯಕ: ಹಶ್ಮತ್ಉಲ್ಲಾ ಶಾಹಿದಿ.
ಗೇಮ್ ಚೇಂಜರ್ಸ್: ರಶೀದ್ ಖಾನ್, ಅಜ್ಮತ್ಉಲ್ಲಾ ಒಮರ್ಜಾಯಿ, ರಹಮಾನುಲ್ಲಾ ಗುರ್ಬಜ್, ಮೊಹಮದ್ ನಬಿ, ಜಲ್ಲಾಕ್ ಫಾರೂಖಿ.
ಕಳೆದ 2023ರ ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾದಂಥ ಬಲಿಷ್ಠ ತಂಡಗಳಿಗೆ ಆಘಾತ ನೀಡಿದ್ದಲ್ಲದೆ, ಆಸೀಸ್ಗೆ ಸೋಲಿನ ಭೀತಿ ಹುಟ್ಟಿಸಿದ್ದ ಅಫ್ಘಾನಿಸ್ತಾನ ಈ ಬಾರಿ ಚಾಂಪಿಯನ್ಸ್ ಟ್ರೋಫಿಗೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದೆ. ಈ ಟೂರ್ನಿಯೂ ಏಷ್ಯಾದಲ್ಲೇ ನಡೆಯುತ್ತಿರುವುದರಿಂದ ಆ್ಘನ್ ಇನ್ನಷ್ಟು ಗಮನಾರ್ಹ ನಿರ್ವಹಣೆ ತೋರಿದರೆ ಅಚ್ಚರಿ ಇಲ್ಲ. ಮಧ್ಯಮ ಸರದಿಯಲ್ಲಿ (4&7) ಭರವಸೆಯ ಬ್ಯಾಟರ್ಗಳಿಲ್ಲದಿರುವುದೊಂದೇ ಆಫ್ಘನ್ಗೆ ಹಿನ್ನಡೆ ಎನಿಸಿದೆ.
ಲಾಹೋರ್/ದುಬೈನಲ್ಲಿ ಫೈನಲ್
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಮಾರ್ಚ್ 9ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಆದರೆ ಭಾರತ ತಂಡ ಫೈನಲ್ಗೆ ಅರ್ಹತೆ ಪಡೆದರೆ ಈ ಪಂದ್ಯ ದುಬೈನಲ್ಲಿ ನಡೆಯಲಿದೆ. ಮಾರ್ಚ್ 10 ಫೈನಲ್ಗೆ ಮೀಸಲು ದಿನವಾಗಿದೆ. 2 ಸೆಮಿಫೈನಲ್ ಪಂದ್ಯಗಳಿಗೂ ಮೀಸಲು ದಿನವಿದೆ. ಆದರೆ ಲೀಗ್ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಭಾರತ ತಂಡ ಸೆಮಿಫೈನಲ್ಗೇರಿದರೆ ದುಬೈನಲ್ಲಿ ಮತ್ತು ಪಾಕಿಸ್ತಾನ ಸೆಮಿಫೈನಲ್ಗೇರಿದರೆ ಲಾಹೋರ್ನಲ್ಲಿ ಆಡಲಿದೆ.
ಒಟ್ಟು ಬಹುಮಾನ: 60 ಕೋಟಿ ರೂ.
ಚಾಂಪಿಯನ್: 19.45 ಕೋಟಿ ರೂ.
ರನ್ನರ್ಅಪ್: 9.72 ಕೋಟಿ ರೂ.
ಸೆಮಿೈನಲಿಸ್ಟ್: 4.86 ಕೋಟಿ ರೂ.
5&6ನೇ ಸ್ಥಾನ: 3 ಕೋಟಿ ರೂ.
7&8ನೇ ಸ್ಥಾನ: 1.2 ಕೋಟಿ ರೂ.
ಗುಂಪಿನ ಪ್ರತಿ ಜಯ: 30 ಲಕ್ಷ ರೂ.
ಗ್ಯಾರಂಟಿ ಮೊತ್ತ: 1.08 ಕೋಟಿ ರೂ.