ದುಬೈ: ಒಂದೂವರೆ ವರ್ಷದ ಹಿಂದೆ ತವರಿನಲ್ಲೇ ನಡೆದ ಏಕದಿನ ವಿಶ್ವಕಪ್ನಲ್ಲಿ ಅಜೇಯವಾಗಿ ಫೈನಲ್ಗೇರಿದರೂ, ಪ್ರಶಸ್ತಿ ಕಾದಾಟದಲ್ಲಿ ಮುಗ್ಗರಿಸಿದ್ದ ಭಾರತ ತಂಡಕ್ಕೆ ಈ ಬಾರಿ ಆ ತಪ್ಪನ್ನು ಸರಿಪಡಿಸಿಕೊಂಡು "ಮಿನಿ ವಿಶ್ವಕಪ್' ಗೆಲುವಿನ ಸಂಭ್ರಮ ಕಾಣುವ ಅವಕಾಶ ಲಭಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 9ನೇ ಆವೃತ್ತಿಯಲ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ ಪಟ್ಟಕ್ಕೇರಲು ಹೋರಾಡಲಿದೆ. ಕಳೆದ ವರ್ಷವಷ್ಟೇ ಟಿ20 ವಿಶ್ವಕಪ್ ಗೆಲುವಿನೊಂದಿಗೆ ದಶಕದ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದ್ದ ಟೀಮ್ ಇಂಡಿಯಾ, ಇದೀಗ ಎಂಟು ತಿಂಗಳ ಅಂತರದಲ್ಲೇ ಎರಡನೇ ಐಸಿಸಿ ಟ್ರೋಫಿ ಗೆಲುವಿನ ವಿಶೇಷ ಸಾಧನೆಯ ತವಕದಲ್ಲಿದೆ.
ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ದುಬೈನಲ್ಲೇ ಆಡಿರುವ ಲೀಗ್ ಹಂತದ ಎಲ್ಲ 3 ಪಂದ್ಯಗಳಲ್ಲಿ ಮತ್ತು ಸೆಮಿಫೈನಲ್ನಲ್ಲಿ ಗೆದ್ದು ಬೀಗಿರುವ ರೋಹಿತ್ ಶರ್ಮ ಪಡೆ ಫೈನಲ್ನಲ್ಲೂ ಅದೇ ನಿರ್ವಹಣೆ ಪುನರಾವರ್ತಿಸುವ ಹಂಬಲದಲ್ಲಿದೆ. ಲೀಗ್ ಹಂತದಲ್ಲಿ ಕಿವೀಸ್ ವಿರುದ್ಧ ಸುಲಭ ಗೆಲುವು ಕಂಡ ವಿಶ್ವಾಸ ಭಾರತ ತಂಡಕ್ಕಿದೆ. ಆದರೆ ಪ್ರಶಸ್ತಿ ಕಾದಾಟದಲ್ಲಿ ಕಿವೀಸ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಯಾಕೆಂದರೆ ಕಿವೀಸ್ ಕೂಡ ಭಾರತದಂತೆ ಬ್ಯಾಟಿಂಗ್-ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ವಿಶೇಷವಾಗಿ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕಿವೀಸ್ ಕೂಡ ಭಾರತದಷ್ಟೇ ಬಲಿಷ್ಠವೆನಿಸಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವುದು ನಿಶ್ಚಿತವೆನಿಸಿದೆ.
ಭಾರತವೇ ಫೇವರಿಟ್, ಆದರೆ....
ಟೂರ್ನಿಯಲ್ಲಿ ಪ್ರಸಕ್ತ ಭರ್ಜರಿ ಫಾರ್ಮ್ನಲ್ಲಿರುವ ಮತ್ತು ದುಬೈ ವಾತಾವರಣವನ್ನು ಅತ್ಯುತ್ತಮವಾಗಿ ಬಳಸಿಕೊಂಡಿರುವ ಭಾರತ ತಂಡ ಫೈನಲ್ ಪಂದ್ಯದಲ್ಲೂ ಫೇವರಿಟ್ ಆಗಿ ಕಣಕ್ಕಿಳಿಯಲಿದೆ. ತಂಡದ ಪ್ರಮುಖ ಬ್ಯಾಟರ್ಗಳು ಲಯಕ್ಕೆ ಮರಳಿರುವುದು, ವೇಗಿ ಮೊಹಮದ್ ಶಮಿ ಹಿಂದಿನ ಲಯ ಕಂಡುಕೊಂಡಿರುವುದು ಮತ್ತು ನಾಲ್ವರು ಸ್ಪಿನ್ ಬೌಲರ್ಗಳ ಕಾರ್ಯತಂತ್ರ ಭಾರತಕ್ಕೆ ಅನುಕೂಲಕರ ಎನಿಸಿದೆ. ಜತೆಗೆ ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಪಾತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಇದೇ ಬಲದಿಂದ ಭಾರತ ಲೀಗ್ ಹಂತದಲ್ಲಿ ಕಿವೀಸ್ ವಿರುದ್ಧ ಗೆಲುವು ದಾಖಲಿಸಿತ್ತು. ಹಾಗೆಂದು ಫೈನಲ್ನಲ್ಲಿ ಮಿಚೆಲ್ ಸ್ಯಾಂಟ್ನರ್ ಬಳಗವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಐಸಿಸಿ ಟೂರ್ನಿಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಕಿವೀಸ್ ಕಳೆದ ವರ್ಷ ನಡೆದ ಟೆಸ್ಟ್ ಸರಣಿಯಲ್ಲಿ ಭಾರತವನ್ನು ತವರಿನಲ್ಲೇ ಮಣಿಸಿತ್ತು. ಆ ತಂಡದಲ್ಲಿನ 8 ಆಟಗಾರರು ಈಗಿನ ತಂಡದಲ್ಲೂ ಇದ್ದಾರೆ. ಆಗ ಭಾರತವನ್ನು ಕಟ್ಟಿಹಾಕಿದ ಕಿವೀಸ್ ಸ್ಪಿನ್ನರ್ಗಳು ಈಗಿನ ತಂಡದಲ್ಲೂ ಇದ್ದಾರೆ. ರಚಿನ್, ಕೇನ್, ಡೆರಿಲ್ ಮಿಚೆಲ್ ಭಾರತ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ವೇಗಿ ಮ್ಯಾಟ್ ಹೆನ್ರಿ ಕಳೆದ ಮುಖಾಮುಖಿಯಲ್ಲಿ ಗಿಲ್, ಕೊಹ್ಲಿ ವಿಕೆಟ್ಗಳನ್ನು ಬೇಗನೆ ಕಬಳಿಸಿ ಭಾರತಕ್ಕೆ ಆರಂಭಿಕ ಆಘಾತ ನೀಡಿದ್ದರು. ಹೀಗಾಗಿ ಭಾರತಕ್ಕೆ ಫೈನಲ್ನಲ್ಲಿ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
ಪಾಕ್ ಪಂದ್ಯದ ಪಿಚ್ ಬಳಕೆ
ಟೂರ್ನಿಯಲ್ಲಿ ಕಳೆದ ಫೆಬ್ರವರಿ 23ರಂದು ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಳಕೆಯಾಗಿದ್ದ ಪಿಚ್ನಲ್ಲೇ ಫೈನಲ್ ಪಂದ್ಯ ನಡೆಯಲಿದೆ. ಇದು ನಿಧಾನಗತಿಯ ಪಿಚ್ ಆಗಿದ್ದು, ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ಲಭಸಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕ್, ಭಾರತೀಯ ಬೌಲರ್ಗಳ ಎದುರು ರನ್ ಗಳಿಸಲು ಪರದಾಡಿತ್ತು. ಪಾಕಿಸ್ತಾನದ 242 ರನ್ ಸವಾಲನ್ನು ಭಾರತ 42.3 ಓವರ್ಗಳಲ್ಲೇ ಬೆನ್ನಟ್ಟಿ ಗೆದ್ದಿತ್ತು. ಆದರೆ ಕಿವೀಸ್ ಕೂಡ ಉತ್ತಮ ಸ್ಪಿನ್ನರ್ಗಳನ್ನು ಹೊಂದಿರುವುದರಿಂದ ಭಾರತಕ್ಕೆ ಈ ಬಾರಿ ನಿಕಟ ಪೈಪೋಟಿ ಎದುರಾಗಬಹುದು.
ಐಸಿಸಿ ನಾಕೌಟ್ನಲ್ಲಿ 1-3 ಹಿನ್ನಡೆ!
ಭಾರತ ತಂಡ ಐಸಿಸಿ ಟೂರ್ನಿಗಳ ನಾಕೌಟ್ ಹಂತದಲ್ಲಿ ನ್ಯೂಜಿಲೆಂಡ್ ಎದುರು 1 ಜಯ, 3 ಸೋಲಿನ ಹಿನ್ನಡೆ ಹೊಂದಿದೆ. ಐಸಿಸಿ ಟೂರ್ನಿಗಳ ಮೊದಲ ಮೂರೂ ನಾಕೌಟ್ ಪಂದ್ಯಗಳಲ್ಲಿ ಕಿವೀಸ್ಗೆ ಶರಣಾಗಿದ್ದ ಭಾರತ, 2023ರ ಕೊನೇ ನಾಕೌಟ್ ಮುಖಾಮುಖಿಯಲ್ಲಿ ಗೆದ್ದಿತ್ತು. 2000ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಮೊದಲ ಬಾರಿ ಮುಖಾಮುಖಿ ಆದಾಗ ಸೋತಿದ್ದ ಭಾರತ ನಂತರ, 2019ರ ಏಕದಿನ ವಿಶ್ವಕಪ್ ಸೆಮೀಸ್ನಲ್ಲೂ ಎಡವಿತ್ತು. ನಂತರ 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲೂ ಭಾರತ ನಿರಾಸೆ ಅನುಭವಿಸಿತ್ತು. 2023ರ ತವರಿನ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ 4ನೇ ಬಾರಿ ಮುಖಾಮುಖಿ ಆದಾಗ ಭಾರತ 70 ರನ್ಗಳಿಂದ ಗೆದ್ದು ಬೀಗಿತ್ತು. ಈ ಬಾರಿ ಐಸಿಸಿ ಟೂರ್ನಿಯಲ್ಲಿ 5ನೇ ಬಾರಿ ಉಭಯ ತಂಡಗಳು ಮುಖಾಮುಖಿ ಆಗಲಿವೆ.
*19: ಟೂರ್ನಿಯ ಚಾಂಪಿಯನ್ ತಂಡ 19.45 ಕೋಟಿ ರೂ. ಬಹುಮಾನ ಪಡೆದರೆ, ರನ್ನರ್ಅಪ್ ತಂಡ 9.72 ಕೋಟಿ ರೂ. ಗಳಿಸಲಿದೆ.
ಟೀಮ್ ನ್ಯೂಸ್:
ಭಾರತ: ಕಳೆದೆರಡು ಪಂದ್ಯಗಳಲ್ಲಿ ಸುಲಭ ಗೆಲುವು ಸಾಧಿಸಿರುವ ತಂಡ ಸಂಯೋಜನೆಯನ್ನೇ ಭಾರತ ಫೈನಲ್ನಲ್ಲೂ ಮುಂದುವರಿಸಲಿದೆ. ಅಂದರೆ ನಾಲ್ವರು ಸ್ಪಿನ್ನರ್ಗಳ ಕಾರ್ಯತಂತ್ರವನ್ನು ಭಾರತ ಮುಂದುವರಿಸುವುದು ನಿಶ್ಚಿತವೆನಿಸಿದೆ. ದುಬೈ ಪಿಚ್ನಲ್ಲಿ ಇದು ಯಶಸ್ವಿ ಕಾಂಬಿನೇಷನ್ ಕೂಡ ಆಗಿದೆ.
ನ್ಯೂಜಿಲೆಂಡ್: ಸೆಮಿಫೈನಲ್ ಪಂದ್ಯದ ಕಾಂಬಿನೇಷನ್ನಲ್ಲಿ ಬದಲಾವಣೆ ಮಾಡಲು ಕಿವೀಸ್ಗೂ ಇಷ್ಟವಿಲ್ಲ. ಆದರೆ ವೇಗಿ ಮ್ಯಾಟ್ ಹೆನ್ರಿ ಭುಜ ನೋವಿನಿಂದ ಬಳಲುತ್ತಿದ್ದು, ಅವರು ಫೈನಲ್ಗೆ ಫಿಟ್ ಆಗದಿದ್ದರೆ ಬದಲಾವಣೆ ಅನಿವಾರ್ಯವೆನಿಸಲಿದೆ. ಹೆನ್ರಿ ಫಿಟ್ ಆಗದಿದ್ದರೆ ಅವರ ಸ್ಥಾನವನ್ನು ಜೇಕಬ್ ಡಫಿ ತುಂಬಲಿದ್ದಾರೆ.
*ಮುಖಾಮುಖಿ: 119
ಭಾರತ: 61
ನ್ಯೂಜಿಲೆಂಡ್: 50
ಟೈ: 1, ರದ್ದು: 7
*ಆರಂಭ: ಮಧ್ಯಾಹ್ನ 2.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
*46: ವಿರಾಟ್ ಕೊಹ್ಲಿ ಫೈನಲ್ನಲ್ಲಿ 46 ರನ್ ಗಳಿಸಿದರೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ರನ್ನು ಹಿಂದಿಕ್ಕಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದ ಸರ್ವಾಧಿಕ ರನ್ಸ್ಕೋರರ್ ಎನಿಸಲಿದ್ದಾರೆ. ಕ್ರಿಸ್ ಗೇಲ್ 17 ಇನಿಂಗ್ಸ್ಗಳಲ್ಲಿ 791 ರನ್ ಗಳಿಸಿದ್ದರೆ, ಕೊಹ್ಲಿ 16 ಇನಿಂಗ್ಸ್ಗಳಲ್ಲಿ 746 ರನ್ ಬಾರಿಸಿದ್ದಾರೆ.
*1: ಭಾರತ ಗೆದ್ದರೆ ಚಾಂಪಿಯನ್ಸ್ ಟ್ರೋಫಿಯನ್ನು 3 ಬಾರಿ ಗೆದ್ದ ಮೊದಲ ತಂಡವೆನಿಸಲಿದೆ. ಸದ್ಯ ಭಾರತ, ಆಸ್ಟ್ರೆಲಿಯಾ (2006, 2009) ತಲಾ 2 ಬಾರಿ ಗೆದ್ದಿರುವುದು ಗರಿಷ್ಠವಾಗಿದೆ.
*7: ಭಾರತ ಗೆದ್ದರೆ 7ನೇ ಬಾರಿ ಐಸಿಸಿ ಟ್ರೋಫಿ ಗೆದ್ದಂತಾಗುತ್ತದೆ. ಭಾರತ ಇದುವರೆಗೆ ತಲಾ 2 ಬಾರಿ ಏಕದಿನ ವಿಶ್ವಕಪ್ (1983, 2011), ಟಿ20 ವಿಶ್ವಕಪ್ (2007, 2024) ಮತ್ತು ಚಾಂಪಿಯನ್ಸ್ ಟ್ರೋಫಿ (2002, 2013) ಜಯಿಸಿದೆ.
*3: ನ್ಯೂಜಿಲೆಂಡ್ ಗೆದ್ದರೆ 3ನೇ ಬಾರಿ ಐಸಿಸಿ ಟ್ರೋಫಿಗೆ ಮುತ್ತಿಕ್ಕಲಿದೆ. ಇದುವರೆಗೆ ತಲಾ ಒಮ್ಮೆ ಚಾಂಪಿಯನ್ಸ್ ಟ್ರೋಫಿ (2000) ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (2021) ಗೆದ್ದಿದೆ.
*2: ಕಿವೀಸ್ ಗೆದ್ದರೆ 25 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಲಿದೆ ಮತ್ತು ತಲಾ 2 ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಆಸೀಸ್ ದಾಖಲೆ ಸರಿಗಟ್ಟಲಿದೆ.
ಸರಣಿಶ್ರೇಷ್ಠ ಪ್ರಶಸ್ತಿ ಸ್ಪರ್ಧೆ
ಚಾಂಪಿಯನ್ಸ್ ಟ್ರೋಫಿಯ ಸರಣಿಶ್ರೇಷ್ಠ ಪ್ರಶಸ್ತಿಗೆ 10 ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ಅವರೆಂದರೆ ವಿರಾಟ್ ಕೊಹ್ಲಿ, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನರ್, ಶ್ರೇಯಸ್ ಅಯ್ಯರ್, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಒಮರ್ಜಾಯಿ, ವರುಣ್ ಚಕ್ರವರ್ತಿ, ಮೊಹಮದ್ ಶಮಿ.