ಕ್ರೀಡೆ

ICC Champions Trophy: ಆಸೀಸ್​-ದಕ್ಷಿಣ ಆಫ್ರಿಕಾ ಪಂದ್ಯ ಮಳೆಯಿಂದ ರದ್ದಾದ ಬಳಿಕ ಬದಲಾಯಿತು ಬಿ ಗುಂಪಿನ ಸೆಮೀಸ್​ ಲೆಕ್ಕಾಚಾರ!

ರಾವಲ್ಪಿಂಡಿ: ಮಾಜಿ ಚಾಂಪಿಯನ್​ಗಳಾದ ಆಸ್ಟ್ರೆಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಮಂಗಳವಾರ ನಿಗದಿಯಾಗಿದ್ದ ಪಂದ್ಯ ಭಾರಿ ಮಳೆಯಿಂದಾಗಿ ಒಂದೂ ಎಸೆತವಿಲ್ಲದೆ ರದ್ದುಗೊಂಡಿದೆ. ಇದರಿಂದಾಗಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ. ಇದರಿಂದಾಗಿ ಬಿ ಗುಂಪಿನ ಸೆಮಿಫೈನಲ್​ ಲೆಕ್ಕಾಚಾರವೂ ಬದಲಾವಣೆ ಕಂಡಿದೆ.

ರಾವಲ್ಪಿಂಡಿಯಲ್ಲಿ ಅನಿರೀತವಾಗಿ ಸುರಿದ ಭಾರಿ ಮಳೆಯಿಂದಾಗಿ ಕನಿಷ್ಠ ಟಾಸ್​ ಪ್ರಕ್ರಿಯೆ ಕೂಡ ನಡೆಸಲು ಸಾಧ್ಯವಾಗಲಿಲ್ಲ. ಕನಿಷ್ಠ ತಲಾ 20 ಓವರ್​ಗಳ ಪಂದ್ಯ ಆಡಿಸಲು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಯವರೆಗೂ ಕಾಯಲು ಅವಕಾಶವಿತ್ತು. ಆದರೆ ಎಡಬಿಡದೆ ಸುರಿದ ಮಳೆಯಿಂದಾಗಿ ಮೈದಾನ ಪೂರ್ತಿ ಒದ್ದೆಯಾಗಿದ್ದರಿಂದ ಮಳೆ ನಿಂತರೂ ಪಂದ್ಯ ನಡೆಸುವುದು ಅಸಾಧ್ಯವೆನಿಸಿತು. ಇದರಿಂದಾಗಿ ಭಾರತೀಯ ಕಾಲಮಾನ ಪ್ರಕಾರ ಸಂಜೆ 5.40ರ ವೇಳೆಗೆ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್​ಗಳು ತೀರ್ಮಾನಿಸಿದರು.

ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಸೀಸ್​-ಆಫ್ರಿಕಾ ನಡುವಿನ 8 ಮುಖಾಮುಖಿಗಳಲ್ಲಿ ಮಳೆಯಿಂದಾಗಿ ರದ್ದುಗೊಂಡ 4ನೇ ಪಂದ್ಯ ಇದಾಗಿದೆ.

ಸೆಮಿಫೈನಲ್​ ಲೆಕ್ಕಾಚಾರ...

ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ್ದ ಆಸೀಸ್​-ದ. ಆಫ್ರಿಕಾ ತಂಡಗಳ 2ನೇ ಪಂದ್ಯ ರದ್ದುಗೊಳ್ಳುವುದರೊಂದಿಗೆ ತಲಾ 3 ಅಂಕಗಳನ್ನು ಹೊಂದಿವೆ. ಇದರಿಂದಾಗಿ ಉಭಯ ತಂಡಗಳೂ ಬಿ ಗುಂಪಿನಿಂದ ಸೆಮಿಫೈನಲ್​ಗೇರಲು ಕೊನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿವೆ. ಸ್ಟೀವನ್​ ಸ್ಮಿತ್​ ಪಡೆ ತನ್ನ ಕೊನೇ ಲೀಗ್​ ಪಂದ್ಯದಲ್ಲಿ ಶುಕ್ರವಾರ ಲಾಹೋರ್​ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಬೇಕೇಕಾಗಿದೆ.  ಇತ್ತ ದ. ಆಫ್ರಿಕಾಕ್ಕೆ ಕೊನೇ ಲೀಗ್​ ಪಂದ್ಯದಲ್ಲಿ ಶನಿವಾರ ಕರಾಚಿಯಲ್ಲಿ ಇಂಗ್ಲೆಂಡ್​ ಸವಾಲು ಎದುರಾಗಲಿದ್ದು, ಆಫ್ಘನ್​ ವಿರುದ್ಧ ಬುಧವಾರ ಇಂಗ್ಲೆಂಡ್​  ಗೆದ್ದರೆ, ದ. ಆಫ್ರಿಕಾ-ಇಂಗ್ಲೆಂಡ್​ ನಡುವಿನ ಬಿ ಗುಂಪಿನ ಕೊನೇ ಪಂದ್ಯ ಕ್ವಾರ್ಟರ್​ಫೈನಲ್​ ಎನಿಸಲಿದೆ. ಮತ್ತೊಂದೆಡೆ ಅಫ್ಘಾನಿಸ್ತಾನಕ್ಕೂ ಸದ್ಯ ಸೆಮೀಸ್​ ಆಸೆ ಜೀವಂತವಿದ್ದು, ಇಂಗ್ಲೆಂಡ್​ ಮತ್ತು ಆಸೀಸ್​ ವಿರುದ್ಧದ ಎರಡೂ ಪಂದ್ಯ ಗೆದ್ದರೆ ಸೆಮಿಫೈನಲ್​ಗೇರಬಹುದಾಗಿದೆ. ಇಂಗ್ಲೆಂಡ್​ಗೂ ಸೆಮಿಫೈನಲ್​ಗೇರಲು ಆಪ್ಘನ್​ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಅನಿವಾರ್ಯವೆನಿಸಿದೆ.