ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್​ಗೆ ಮಹಿಳಾ ಕ್ರಿಕೆಟ್ ಅರ್ಹತಾ ಪ್ರಕ್ರಿಯೆ ಅನಾವರಣಗೊಳಿಸಿದ ಐಸಿಸಿ

ದುಬೈ: ಬರ್ಮಿಂಗ್‌ಹ್ಯಾಂನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ನ ಮಹಿಳೆಯರ ಟಿ20 ಕ್ರಿಕೆಟ್ ಸ್ಪರ್ಧೆಗೆ ಅರ್ಹತಾ ಪ್ರಕ್ರಿಯೆಯನ್ನು ಐಸಿಸಿ ಮತ್ತು ಕಾಮನ್ವೆಲ್ತ್ ಗೇಮ್ಸ್ ಒಕ್ಕೂಟ (ಸಿಜಿಎ್) ಬುಧವಾರ ಅನಾವರಣಗೊಳಿಸಿದೆ. ಆತಿಥೇಯ ಇಂಗ್ಲೆಂಡ್ ತಂಡ ಮತ್ತು ಮುಂದಿನ ವರ್ಷ ಏಪ್ರಿಲ್ 1ರ ವೇಳೆಗೆ ಐಸಿಸಿ ರ‌್ಯಾಂಕಿಂಗ್‌ನಲ್ಲಿ ಅಗ್ರ 6ರೊಳಗೆ ಸ್ಥಾನ ಪಡೆಯುವ ತಂಡಗಳು ಕಾಮನ್ವೆಲ್ತ್ ಗೇಮ್ಸ್‌ಗೆ ನೇರ ಅರ್ಹತೆ ಪಡೆಯಲಿವೆ ಎಂದು ತಿಳಿಸಲಾಗಿದೆ.

ಕಾಮನ್ವೆಲ್ತ್ ಗೇಮ್ಸ್ 2022ರ ಜುಲೈ 28ರಿಂದ ಆಗಸ್ಟ್ 8ರವರೆಗೆ ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿದೆ. ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಸ್ಪರ್ಧೆಯನ್ನು ಸೇರಿಸಲಾಗಿದೆ. ಇದಕ್ಕೆ ಮುನ್ನ 1998ರ ಕೌಲಾಲಂಪುರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಏಕದಿನ ಕ್ರಿಕೆಟ್ ಸ್ಪರ್ಧೆ ನಡೆದಿತ್ತು. 8 ತಂಡಗಳ ಮಹಿಳಾ ಕ್ರಿಕೆಟ್ ಸ್ಪರ್ಧೆಯ ಪಂದ್ಯಗಳು ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿವೆ.

ಐಸಿಸಿ ರ‌್ಯಾಂಕಿಂಗ್‌ನಲ್ಲಿ ಭಾರತ ತಂಡ ಸದ್ಯ 3ನೇ ಸ್ಥಾನದಲ್ಲಿದ್ದು, ಅಗ್ರ 6ರೊಳಗೆ ಮುಂದುವರಿದರೆ ಕಾಮನ್ವೆಲ್ತ್ ಗೇಮ್ಸ್‌ಗೆ ನೇರಅರ್ಹತೆ ಸಂಪಾದಿಸಲಿದೆ. ಕಾಮನ್ವೆಲ್ತ್ ಗೇಮ್ಸ್ ಅರ್ಹತಾ ಟೂರ್ನಿಯಲ್ಲಿ ಜಯಿಸುವ ಮತ್ತೊಂದು ತಂಡವೂ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದೆ. ಅರ್ಹತಾ ಟೂರ್ನಿ 2022ರ ಜನವರಿ 31ಕ್ಕೆ ಮುನ್ನ ನಡೆಯಲಿದೆ.

ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಬದಲಾಗಿ ಕೆರಿಬಿಯನ್ ದ್ವೀಪರಾಷ್ಟ್ರಗಳ ಕ್ರೀಡಾಪಟುಗಳು ಪ್ರತ್ಯೇಕವಾಗಿ ತಮ್ಮ ದೇಶವನ್ನು ಪ್ರತಿನಿಧಿಸಲಿರುವ ಕಾರಣ, ವೆಸ್ಟ್ ಇಂಡೀಸ್ ಮಹಿಳಾ ತಂಡ ಅರ್ಹತೆ ಸಂಪಾದಿಸಿದರೆ, ಕೆರಿಬಿಯನ್ ದೇಶಗಳ ನಡುವೆ ಪ್ರತ್ಯೇಕವಾದ ಅರ್ಹತಾ ಸ್ಪರ್ಧೆ ನಡೆದು ಒಂದು ದೇಶದ ಕ್ರಿಕೆಟಿಗರಿಗಷ್ಟೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ.