ಕ್ರೀಡೆ

ಇಂದು ಐಸಿಸಿ ಮಹತ್ವದ ಸಭೆ: ಟಿ20 ವಿಶ್ವಕಪ್ ಭವಿಷ್ಯ, ಹೊಸ ಚೇರ್ಮನ್ ಆಯ್ಕೆ ಪ್ರಕ್ರಿಯೆ ನಿರ್ಧಾರ

ನವದೆಹಲಿ: ಮುಂದಿನ ಅಕ್ಟೋಬರ್-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡುವುದು ಸೇರಿದಂತೆ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಶಕ್ತಿಶಾಲಿ ಮಂಡಳಿ ಗುರುವಾರ ಟೆಲಿ-ಕಾನ್ಪರೆನ್ಸ್ ಮೂಲಕ ಸಭೆ ನಡೆಸಲಿದೆ. ಕೋವಿಡ್-19ರ ಹಾವಳಿ ನಡುವೆ ಸದಸ್ಯ ರಾಷ್ಟ್ರಗಳಿಗೆ ತಮ್ಮ ಮುಂಬರುವ ದ್ವಿಪಕ್ಷೀಯ ಸರಣಿಗಳ ನೀಲಿನಕ್ಷೆಯನ್ನು ರೂಪಿಸಲು ಕೂಡ ಐಸಿಸಿ ಅವಕಾಶ ಮಾಡಿಕೊಡಲಿದೆ. ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಅದೇ ಸಮಯದಲ್ಲಿ ಐಪಿಎಲ್ ಟೂರ್ನಿ ಆಯೋಜಿಸುವುದಕ್ಕೂ ಅವಕಾಶ ಲಭಿಸುವ ನಿರೀಕ್ಷೆ ಇದೆ.

‘ಟಿ20 ವಿಶ್ವಕಪ್ ಮುಂದೂಡಲ್ಪಡುವ ಸಾಧ್ಯತೆ ಹೆಚ್ಚಿದೆ. ಆದರೆ ಅದರ ಅಧಿಕೃತ ಘೋಷಣೆ ಗುರುವಾರವೇ ಆಗುವುದೇ ಎಂಬುದು ಸ್ಪಷ್ಟವಿಲ್ಲ. ಹಾಲಿ ಪರಿಸ್ಥಿತಿಯಲ್ಲಿ ವಿಶ್ವಕಪ್ ಟೂರ್ನಿ ನಿಗದಿಯಂತೆ ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾವೂ ಇದಕ್ಕೆ ಆಕ್ಷೇಪ ಎತ್ತುವ ಸಾಧ್ಯತೆ ಇಲ್ಲ’ ಎಂದು ಐಸಿಸಿ ಮಂಡಳಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಈ ಮುನ್ನ ಮೇ 15ರಂದು ನಡೆದ ಐಸಿಸಿಯ ಇವೆಂಟ್ಸ್ ಸಮಿತಿಯ ಸಭೆಯಲ್ಲಿ ವಿವಿಧ ಆಯ್ಕೆಗಳ ಬಗ್ಗೆ ರ್ಚಚಿಸಲಾಗಿದೆ. ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡುವುದು ಕೂಡ ಅದರಲ್ಲಿ ಸೇರಿದೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಕೂಡ ಟಿ20 ವಿಶ್ವಕಪ್​ಗಿಂತ ವರ್ಷಾಂತ್ಯದಲ್ಲಿ ಭಾರತ ತಂಡಕ್ಕೆ ಆತಿಥ್ಯ ವಹಿಸುವತ್ತ ಹೆಚ್ಚಿನ ಗಮನಹರಿಸಿದೆ ಎನ್ನಲಾಗಿದೆ. ವಿಶ್ವಕಪ್ ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸುವುದಕ್ಕಿಂತ, ಭಾರತ ವಿರುದ್ಧ ಸರಣಿಯನ್ನು ಪ್ರೇಕ್ಷಕರಿಲ್ಲದೆ ಆಯೋಜಿಸಿ ದರೂ, ಟಿವಿ ಪ್ರಸಾರ ಹಕ್ಕಿನಿಂದ ಹೆಚ್ಚಿನ ಹಣ ಗಳಿಸಬಹುದು ಎಂಬುದು ಸಿಎ ಚಿಂತನೆಯಾಗಿದೆ.

ಐಸಿಸಿ ಅಧಿಕಾರಿ ನಿರಾಕರಣೆ: ಈ ನಡುವೆ ಐಸಿಸಿ ಅಧಿಕಾರಿ ಯೊಬ್ಬರು, ಟಿ20 ವಿಶ್ವಕಪ್ ಮುಂದೂಡಲಾಗುತ್ತದೆ ಎಂಬ ವರದಿ ನಿಜವಲ್ಲ ಎಂದಿದ್ದಾರೆ. ಅ.18ರಿಂದ ನ. 15ರವರೆಗೆ ನಿಗದಿಯಾಗಿರುವ ಟೂರ್ನಿ ಆಯೋಜನೆಗಾಗಿ ವಿವಿಧ ಯೋಜನೆ ರ್ಚಚಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಚೇರ್ಮನ್ ರೇಸ್​ಗೆ ಬರುವರೇ ದಾದಾ?

ಶಶಾಂಕ್ ಮನೋಹರ್ ಉತ್ತರಾಧಿಕಾರಿಯಾಗಿ ಹೊಸ ಐಸಿಸಿ ಚೇರ್ಮನ್ ಆಯ್ಕೆ ಪ್ರಕ್ರಿಯೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಹಾಲಿ ಬೆಳವಣಿಗೆಗಗಳ ಪ್ರಕಾರ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಹೊಸ ಚೇರ್ಮನ್ ಹುದ್ದೆಗೆ ಫೇವರಿಟ್ ಅಭ್ಯರ್ಥಿಯಾಗಿದ್ದಾರೆ. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊನೇಕ್ಷಣದಲ್ಲಿ ಐಸಿಸಿ ಚೇರ್ಮನ್ ರೇಸ್​ಗೆ ಪ್ರವೇಶ ಪಡೆದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಪ್ರತಿಕ್ರಿಯಿಸಿಲ್ಲ.

ಐಪಿಎಲ್ ಆಯೋಜನೆಗೂ ಯೋಜನೆ

ಭಾರತದಲ್ಲಿ ಐಪಿಎಲ್ ಆಯೋಜಿಸುವಲ್ಲಿ ಬಿಸಿಸಿಐಗಿಂತ ಕೇಂದ್ರ ಸರ್ಕಾರದ ನಿರ್ಧಾರವೇ ಪ್ರಮುಖ ಪಾತ್ರವಹಿಸುತ್ತದೆ. ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಈಗಾಗಲೆ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಬಂದರೆ, ಕನಿಷ್ಠ 5 ವಾರಗಳ ಅಂತರದಲ್ಲಿ ಐಪಿಎಲ್ ಟೂರ್ನಿ ಆಯೋಜಿಸುವ ವಿಶ್ವಾಸವನ್ನು ಬಿಸಿಸಿಐ ಹೊಂದಿದೆ ಎನ್ನಲಾಗಿದೆ. ಆದರೆ ಐಸಿಸಿ ಮಾರ್ಗಸೂಚಿಯಂತೆ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಲಭಿಸುವ ಸಾಧ್ಯತೆ ಇಲ್ಲ. ಟೂರ್ನಿ ಆಯೋಜಿಸುವ ತಾಣಗಳ ಸಂಖ್ಯೆ ಕಡಿತ, ಡಬಲ್-ಹೆಡ್ಡರ್​ಗಳ ಸಂಖ್ಯೆ ಹೆಚ್ಚಳದ ಕಾರ್ಯತಂತ್ರವೂ ಬಿಸಿಸಿಐ ಮುಂದಿದೆ. ಇನ್ನು ವಿದೇಶಿ ಆಟಗಾರರನ್ನು ಬಾಡಿಗೆ ವಿಮಾನಗಳ ಮೂಲಕ ಕರೆಸಿಕೊಂಡು 14 ದಿನಗಳ ಕ್ವಾರಂಟೈನ್​ನಲ್ಲಿಟ್ಟು, ನಂತರ ಐಪಿಎಲ್​ನಲ್ಲಿ ಆಡಿಸುವ ಬಗ್ಗೆಯೂ ಬಿಸಿಸಿಐ ಯೋಜನೆ ರೂಪಿಸಿದೆ.