ದುಬೈ: ಮುಂದಿನ ಆವೃತ್ತಿಯ 2029ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಏರಿಸಲಾಗುವುದು ಎಂದು ಐಸಿಸಿ ಶುಕ್ರವಾರ ಘೋಷಿಸಿದೆ. ಇತ್ತೀಚೆಗೆ ಭಾರತದ ಗೆಲುವಿನೊಂದಿಗೆ ಮುಕ್ತಾಯಗೊಂಡ ವಿಶ್ವಕಪ್ನಲ್ಲಿ 8 ತಂಡಗಳು ಆಡಿದ್ದವು. ಈ ಟೂರ್ನಿಯ ಯಶಸ್ಸಿನ ಹಿನ್ನೆಲೆಯಲ್ಲಿ ಮತ್ತೆ 2 ಹೊಸ ತಂಡಗಳನ್ನು ಸೇರಿಸಲು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಯಿತು.
2026ರಲ್ಲಿ ಅಸೋಸಿಯೇಟ್ ದೇಶಗಳಿಗೆ ನೀಡಲಾಗುವ ಅನುದಾನವನ್ನು ಶೇ. 10 ಹೆಚ್ಚಿಸಲು ಕೂಡ ಐಸಿಸಿ ತೀರ್ಮಾನಿಸಿದೆ. ಈಗಾಗಲೆ ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ಗೆ ಸೇರ್ಪಡೆಯಾಗಿರುವ ಕ್ರಿಕೆಟ್ ಪದಕ ಸ್ಪರ್ಧೆಯನ್ನು 2027ರ ಆಫ್ರಿಕನ್ ಗೇಮ್ಸ್ ಮತ್ತು ಪಾನ್-ಆಮ್ ಗೇಮ್ಸ್ಗೂ ಸೇರಿಸಲು ನಿರ್ಧಸಲಾಯಿತು. ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಐಸಿಸಿ ಮಹಿಳಾ ಕ್ರಿಕೆಟ್ ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ.