ಕ್ರೀಡೆ

ಬೆಂಗಳೂರು ಬುಲ್ಸ್​ ನಾಯಕ ರೋಹಿತ್​ ಕುಮಾರ್​ ಕಬಡ್ಡಿ ಆಟಗಾರನಾಗದಿದ್ದರೆ ಏನಾಗುತ್ತಿದ್ದರು ಗೊತ್ತೇ?

ಬೆಂಗಳೂರು: ಕರೊನಾ ಹಾವಳಿ ಇಲ್ಲಿದ್ದರೆ ಕ್ರೀಡಾಪ್ರೇಮಿಗಳು ಇಷ್ಟೊತ್ತಿಗೆ ಐಪಿಎಲ್​ ಟೂರ್ನಿಯನ್ನು ಮುಗಿಸಿ ಪ್ರೊ ಕಬಡ್ಡಿ ಲೀಗ್​ ವೀಕ್ಷಿಸಲು ಸಜ್ಜಾಗುತ್ತಿರಬೇಕಾಗಿತ್ತು. ಆದರೆ ಕರೊನಾ ಭೀತಿಯಿಂದಾಗಿ ಈ ವರ್ಷ ಪ್ರೊ ಕಬಡ್ಡಿ ಲೀಗ್​ ಟೂರ್ನಿ ನಡೆಯುವುದೇ ಅನುಮಾನವೆನಿಸಿದೆ. ಕಬಡ್ಡಿ ಆಟಗಾರರೂ ಈಗ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲಾಗದೆ ಖಾಲಿ ಕುಳಿತಿದ್ದಾರೆ. ಈ ನಡುವೆ ಬೆಂಗಳೂರು ಬುಲ್ಸ್ ತಂಡದ ನಾಯಕ ರೋಹಿತ್​ ಕುಮಾರ್​ ಕಬಡ್ಡಿ ಆಟಗಾರನಾಗದೇ ಇರುತ್ತಿದ್ದರೆ ತಾನು ಏನಾಗುತ್ತಿದ್ದೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರೊ ಕಬಡ್ಡಿ ಲೀಗ್​ ಆರನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್​ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದ ರೋಹಿತ್​ಕುಮಾರ್​, 2016ರ ಸೌತ್​ ಏಷ್ಯನ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತ ತಂಡದ ಭಾಗವೂ ಆಗಿದ್ದರು. ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರನ್ನು ಅಪಾರವಾಗಿ ಇಷ್ಟಪಡುವ ರೋಹಿತ್​ ಕುಮಾರ್​, ಕಬಡ್ಡಿ ಆಟಗಾರನಾಗದೇ ಹೋಗಿರುತ್ತಿದ್ದರೆ ತಾನು ನಟನಾಗಿರುತ್ತಿದ್ದೆ ಎಂದು ಇನ್​ಸ್ಟಾಗ್ರಾಂ ಲೈವ್​ ಚಾಟ್​ ಶೋನಲ್ಲಿ ಹೇಳಿಕೊಂಡಿದ್ದಾರೆ.

'ಬಾಲ್ಯದಲ್ಲಿ ನನಗೆ ಕ್ರೀಡೆಯ ಮೇಲೆ ಯಾವುದೇ ಆಸಕ್ತಿ ಇರಲಿಲ್ಲ. ಊರಿನಲ್ಲಿ ನನ್ನ ಹಿರಿಯರು ಕಬಡ್ಡಿ ಆಟ ಆಡುತ್ತಿದ್ದರು. ಒಂದು ದಿನ ನಾನು ರಾಕೇಶ್​ ಕುಮಾರ್​ ಮತ್ತು ಇತರರು ಕಬಡ್ಡಿ ಆಡುತ್ತಿರುವುದನ್ನು ನೋಡಿದೆ. ಅದರಿಂದ ಸ್ಫೂರ್ತಿಗೊಂಡು ಕಬಡ್ಡಿ ಆಟಗಾರನಾಗಲು ಬಯಸಿದೆ. ನನ್ನ ತಂದೆಯೂ ಕೆಲಕಾಲ ಕಬಡ್ಡಿ ಆಡಿದ್ದರು. ಆದರೆ ಬಳಿಕ ದೆಹಲಿ ಪೊಲೀಸ್​ ಇಲಾಖೆ ಸೇರಿಕೊಂಡಿದ್ದರು. ಆದರೂ ಅವರಿಗೆ ಕಬಡ್ಡಿ ಮೇಲಿನ ಆಸಕ್ತಿ ಕಡಿಮೆಯಾಗಿರಲಿಲ್ಲ. ಹೀಗಾಗಿ ಊರಿನಲ್ಲಿ ಕಬಡ್ಡಿ ಪಂದ್ಯಗಳನ್ನು ನೋಡಲು ಹೋಗುವಾಗ ನನ್ನನ್ನೂ ಕರೆದೊಯ್ಯುತ್ತಿದ್ದರು' ಎಂದು ರೋಹಿತ್​ ಕುಮಾರ್​ ತಮಗೆ ಕಬಡ್ಡಿ ಆಟದ ಮೇಲೆ ಆಸಕ್ತಿ ಬೆಳೆದುದನ್ನು ವಿವರಿಸಿದ್ದಾರೆ.