Fathima Sana: ಸೆಪ್ಟೆಂಬರ್ 30ರಿಂದ ಆರಂಭವಾಗುವ 50 ಓವರ್ಗಳ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸುತ್ತಿರುವ ಫಾತೀಮಾ ಸನಾ, ಭಾರತ ಕ್ರಿಕೆಟ್ ತಂಡದ ದಂತಕಥೆ, ಕ್ಯಾಪ್ಟನ್ ಕೂಲ್, 2011ರ ವಿಶ್ವಕಪ್ ವಿಜೇತ ತಂಡದ ನಾಯಕ ಎಂ.ಎಸ್.ಧೋನಿಯೇ ನನಗೆ ಸ್ಪೂರ್ತಿ, ಅವರಂತೆ ಆಗಬೇಕು ಎನ್ನುವ ಆಕಾಂಕ್ಷೆಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಮಹಿಳಾ ವಿಶ್ವಕಪ್ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ಬಿಸಿಸಿಐ ಮತ್ತು ಪಿಸಿಬಿ ನಡುವೆ ನಡೆದ ಒಪ್ಪಂದದ ಪ್ರಕಾರ ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಫಾತೀಮಾ ಪಾಕ್ ತಂಡದ ನಾಯಕತ್ವ ಹೊಂದಿದ್ದು. ಅಕ್ಟೋಬರ್ 2 ರಂದು ಕೊಲಂಬೊದಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಪಿಟಿಐ ಭಾಷಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕ್ಯಾಪ್ಟನ್ ಫಾತೀಮಾ, ವಿಶ್ವಕಪ್‌ನಂತಹ ದೊಡ್ಡ ಟೂರ್ನಮೆಂಟ್‌ನಲ್ಲಿ ನಾಯಕತ್ವ ವಹಿಸುವಾಗ ಆರಂಭದಲ್ಲಿ ಸ್ವಲ್ಪ ಆತಂಕಕ್ಕೊಳಗಾಗುವುದು ಸಹಜ. ಆದರೆ ನಾಯಕಿಯಾಗಿ ನಾನು ಮಹೇಂದ್ರ ಸಿಂಗ್ ಧೋನಿಯಿಂದ ಸ್ಫೂರ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಎಂ.ಎಸ್.ಧೋನಿಯವರ ಟೀಂ ಇಂಡಿಯಾ ಮತ್ತು ಐಪಿಎಲ್ನ ಸಿಎಸ್ಕೆ ತಂಡದ ನಾಯಕನಾಗಿ ಆಡಿದ ಅವರ ಪಂದ್ಯಗಳನ್ನು ನಾನು ನೋಡಿದ್ದೇನೆ. ಅವರು ಮೈದಾನದಲ್ಲಿ ತೆಗೆದುಕೊಳ್ಳುವ ನಿರ್ಧಾರ, ಶಾಂತತೆ, ಆಟಗಾರರನ್ನು ಬೆಂಬಲಿಸುವ ರೀತಿ ಅವರಿಂದ ಕಲಿಯಲು ಬಹಳಷ್ಟು ಇದೆ. ನಾನು ಕ್ಯಾಪ್ಟನ್ ಆದಾಗ, ಧೋನಿಯಂತೆ ಆಗಬೇಕು ಎಂದು ಭಾವಿಸಿದೆ. ಅವರ ಸಂದರ್ಶನಗಳನ್ನು ಸಹ ನೋಡಿದ್ದೇನೆ, ಅದರಿಂದ ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಮಹಿಳಾ ಕ್ರಿಕೆಟ್ಗೆ ಈ ವಿಶ್ವಕಪ್ ಪಂದ್ಯಾವಳಿ ಎಷ್ಟು ಮುಖ್ಯ ಎಂದು ಯುವ ಆಟಗಾರ್ತಿಯರಿಗೆ ತಿಳಿದಿದೆ. ಈ ಹಿಂದೆ ಏನಾಗಿದೆ ಎಂದು ನಾವು ಯೋಚಿಸುವುದಿಲ್ಲ. ಈ ಬಾರಿ ತಂಡವನ್ನು ಸೆಮಿಫೈನಲ್ಗೆ ಕರೆದೊಯ್ಯುವುದು ನನ್ನ ಮುಖ್ಯ ಗುರಿ. ಈ ಬಾರಿ ತಮ್ಮ ಪ್ರದರ್ಶನವು ದೇಶದಲ್ಲಿ ಮಹಿಳಾ ಕ್ರಿಕೆಟ್‌ನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
2020 ಆಗಸ್ಟ್ 15ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಧೋನಿ ನಿವೃತ್ತರಾದರು. ಆದರೆ ಫಾತಿಮಾ ಸನಾ 2020 ಮೇ 6ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಆಲ್‌ರೌಂಡರ್ ಆಗಿರುವ ಫಾತಿಮಾ 34 ಏಕದಿನ ಪಂದ್ಯಗಳಲ್ಲಿ 397 ರನ್ ಗಳಿಸಿ 45 ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾದ ತಾರೆ ಎಲಿಸ್ ಪೆರ್ರಿಯವರ ದೊಡ್ಡ ಅಭಿಮಾನಿಯಾಗಿರುವ ಫಾತಿಮಾ, 11 ನೇ ವಯಸ್ಸಿನಲ್ಲಿ ಕರಾಚಿಯಲ್ಲಿ ತನ್ನ ಸಹೋದರರೊಂದಿಗೆ ಬೀದಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಕಳೆದ ವರ್ಷ ಟಿ20 ವಿಶ್ವಕಪ್ ಸಮಯದಲ್ಲಿ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ವಿಶ್ವಕಪ್‌ನಲ್ಲಿ ನಾನು ಆಡುವುದನ್ನು ನೋಡಬೇಕೆಂದು ನನ್ನ ತಂದೆ ಕನಸು ಕಂಡಿದ್ದರು. ಅವರ ಆಸೆಯನ್ನು ಪೂರೈಸಲು ಕ್ರಿಕೆಟ್ಗೆ ಪಾದರ್ಪಣೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ತಂದೆಯ ಕನಸಿನಂತೆ ಇಂದು ಪಾಕ್ ತಂಡ ಕ್ಯಾಪ್ಟನ್ ಆಗಿದ್ದಾರೆ. (ಏಜೆನ್ಸೀಸ್)