ಕ್ರೀಡೆ

ಕಪಿಲ್​ನನ್ನು ಜಗತ್ತು ಶಪಿಸುತ್ತದೆ; ಆಲ್​ರೌಂಡರ್​​​​ ಯುವರಾಜ್​​ ಸಿಂಗ್​​ ತಂದೆ ಹೀಗೆಳಿದ್ದೇಕೆ?

ನವದೆಹಲಿ: ಭಾರತೀಯ ದಂತಕಥೆಗಳಾದ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಬಗ್ಗೆ ಆಲ್​ರೌಂಡರ್​ ಯುವರಾಜ್​​ ಸಿಂಗ್​ ಅವರ ತಂದೆ ಯೋಗರಾಜ್​ ಸಿಂಗ್​​​ ದೂಷಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅಂದ್ಹಾಗೆ ಎಂಎಸ್​ ಧೋನಿ ಬಗ್ಗೆ ಯೋಗರಾಜ್​​ ಸಿಂಗ್​ ಈ ರೀತಿ ಮಾತನಾಡುತ್ತಿರುವುದು ಇದೇ ಮೊದಲನೆಲ್ಲ. ಈ ಮೊದಲು ಧೋನಿ ಬಗ್ಗೆ ತಮ್ಮ ನಕಾರಾತ್ಮಕ ಭಾವನೆಯನ್ನು ಹೊರಹಾಕಿದ್ದರು.

ಆದರೆ ಈ ಬಾರಿ ಸಾರ್ವಕಾಲಿಕ ಶ್ರೇಷ್ಠ ನಾಯಕ ಲೆಜೆಂಡರಿ ಕಪಿಲ್​ ದೇವ್​ ಬಗ್ಗೆಯೂ ತೀಕ್ಷ್ಣ ಮಾತುಗಳಿಂದ ಟೀಕಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಅವರು ನೀಡಿರುವ ಹೇಳಿಕೆಯಲ್ಲಿ, ನನ್ನ ಮಗ ಯುವರಾಜ್ ಸಿಂಗ್ ಒಟ್ಟು 13 ಟ್ರೋಫಿಗಳನ್ನು ಹೊಂದಿದ್ದಾರೆ. ಆದರೆ ನಮ್ಮ ಕಾಲದ ಶ್ರೇಷ್ಠ ನಾಯಕ ಕಪಿಲ್ ದೇವ್ 1983ರಲ್ಲಿ ಭಾರತ ಗೆದ್ದ ಮೊದಲ ವಿಶ್ವಕಪ್​ನ ಟ್ರೋಫಿ ಅದೊಂದನ್ನು ಹೊಂದಿದ್ದಾರೆ. ಇಡೀ ಜಗತ್ತೇ ನಿಮ್ಮನ್ನು ಶಪಿಸುವಂತಹ ಸ್ಥಿತಿಗೆ ನಿಮ್ಮನ್ನು ಹಾಕುತ್ತೇನೆ ಎಂದು ನಾನು ಅವರಿಗೆ ಹೇಳಿದ್ದೇನೆ ಎಂದಿದ್ದಾರೆ.

ಎಂಎಸ್ ಧೋನಿ ಬಗ್ಗೆ ಮಾತನಾಡಿದ ಅವರು, ನಾನು ಎಂದಿಗೂ ಅವನನ್ನು ಕ್ಷಮಿಸುವುದಿಲ್ಲ. ಅವರು ಕನ್ನಡಿಯಲ್ಲಿ ಅವರ ಮುಖವನ್ನು ನೋಡಬೇಕು. ಶ್ರೇಷ್ಠ ಕ್ರಿಕೆಟಿಗ ಎಂಬ ಕಾರಣಕ್ಕೆ ಅವರನ್ನು ಗೌರವಿಸುತ್ತೇನೆ. ಆದರೆ ಅವರು ನನ್ನ ಮಗನಿಗೆ ಏನು ಮಾಡಿದರು. ನನ್ನ ಜೀವನದಲ್ಲಿ ನಾನು ಎರಡು ಕೆಲಸಗಳನ್ನು ಮಾಡುವುದಿಲ್ಲ. ತಪ್ಪು ಮಾಡಿದವರನ್ನು ಎಂದಿಗೂ ಕ್ಷಮಿಸಿಲ್ಲ ಮತ್ತು ಅವರು ಬಯಸಿದ್ದರೂ ಸಹ ನಾನು ಅವರನ್ನು ಎಂದಿಗೂ ತಬ್ಬಿಕೊಂಡಿಲ್ಲ ಎಂದು ಹೇಳಿದ್ದಾರೆ.

ಆ ವ್ಯಕ್ತಿ (ಎಂಎಸ್ ಧೋನಿ) ನನ್ನ ಮಗನ ಜೀವನವನ್ನು ಹಾಳುಮಾಡಿದ್ದಾನೆ. ಇನ್ನೂ ಐದು ವರ್ಷಗಳ ಕಾಲ ಆಡಬಹುದಿತ್ತು. ಯುವರಾಜ್ ಸಿಂಗ್ ಅವರಂತಹ ಮಗನನ್ನು ಹುಟ್ಟುಹಾಕಲು ನಿಮಗೆ ಸವಾಲು ಹಾಕುತ್ತೇನೆ. ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ದೇಶಕ್ಕಾಗಿ ವಿಶ್ವಕಪ್ ಗೆದ್ದ ಯುವರಾಜ್ ಸಿಂಗ್ ಅವರಿಗೆ ಭಾರತ ರತ್ನ ಗೌರವ ಸಿಗಬೇಕು ಎಂದು ಹೇಳಿದರು ಎಂದಿದ್ದಾರೆ.

ಯುವರಾಜ್ ಮತ್ತು ಧೋನಿ 2007 ರಿಂದ 2013 ರವರೆಗಿನ ಐಸಿಸಿ ಈವೆಂಟ್‌ಗಳಲ್ಲಿ ತಂಡದ ಯಶಸ್ಸಿಗೆ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಆದರೂ ಭಾರತೀಯ ಕ್ರಿಕೆಟ್‌ನಲ್ಲಿ ಯುವರಾಜ್ ಅವರ ಕೊನೆಯ ವರ್ಷಗಳು ಧೋನಿಯವರಷ್ಟು ಲಾಭದಾಯಕವಾಗಿರಲಿಲ್ಲ.(ಏಜೆನ್ಸೀಸ್​​)