ನವದೆಹಲಿ: ಇನ್ಸ್ಟಾಗ್ರಾಂನಲ್ಲಿ ಭಾರತೀಯ ಅಭಿಮಾನಿಯೊಬ್ಬರ ಕಾಮೆಂಟ್ಗೆ ಹಾಸ್ಯಮಯ ಪ್ರತಿಕ್ರಿಯೆ ನೀಡುವ ಮೂಲಕ ಆಸ್ಟ್ರೇಲಿಯಾದ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ.
ಆಸಿಸ್ನ ಸ್ಟಾರ್ ವೇಗಿ ತಮ್ಮ ಪತ್ನಿ ಬೆಕಿ ಕಮ್ಮಿನ್ಸ್ ಜತೆಗಿರುವ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಪ್ರೇಮಿಗಳ ದಿನದ ಶುಭಕೋರಿದ್ದಾರೆ. ಫೋಟೋದಲ್ಲಿ ದಂಪತಿ ಬೀಚ್‌ನಲ್ಲಿ ತಮ್ಮ ಸಮಯವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಸೂಪರ್ ಮಮ್ಮಿ, ಪತ್ನಿ, ನನ್ನ ಪ್ರೇಮಿ ಮತ್ತು ಸರ್ಫರ್ ಕೂಡ ಹೌದು. ಹ್ಯಾಪಿ ವ್ಯಾಲಂಟೈನ್ಸ್ ಡೇ ಬೆಕಿ ಕಮಿನ್ಸ್ ಎಂದು ಫೋಟೋಗೆ ಕಮಿನ್ಸ್ ಅಡಿಬರಹ ಬರೆದುಕೊಂಡಿದ್ದಾರೆ.
ಕಮಿನ್ಸ್ ಪೋಸ್ಟ್ಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. ಎಲ್ಲ ಕಾಮೆಂಟ್ಗಳಿಗಿಂತ ಒರ್ವ ಅಭಿಮಾನಿ ಮಾಡಿರುವ ಕಾಮೆಂಟ್ ಬಹಳ ಗಮನ ಸೆಳೆದಿದೆ. ನಾನು ಭಾರತೀಯ ನಾನು ನಿಮ್ಮ ಪತ್ನಿಯನ್ನು ಪ್ರೀತಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಅಷ್ಟೇ ಸೊಗಸಾಗಿ ಕಮಿನ್ಸ್ ಪ್ರತಿಕ್ರಿಯಿಸಿದ್ದು, ನಾನು ನಿಮ್ಮ ಸಂದೇಶವನ್ನು ಅವಳಿಗೆ ರವಾನಿಸುತ್ತೇನೆ ಎಂದಿದ್ದಾರೆ. ಸದ್ಯ ಈ ಕಾಮೆಂಟ್ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ.
ಇನ್ನೂ 2023ರ ವರ್ಷವು ಕಮ್ಮಿನ್ಸ್ ಜೀವನದಲ್ಲೇ ಸ್ಮರಣೀಯವಾಗಿದೆ. ಏಕೆಂದರೆ, ಸ್ಟಾರ್ ವೇಗಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಎತ್ತಿಹಿಡಿಯಿತು. ತಮ್ಮ ಸಾಧನೆಗಾಗಿ ಕಮಿನ್ಸ್ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. (ಏಜೆನ್ಸೀಸ್)