ಕ್ರೀಡೆ

4ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದರೂ ಸಿಎಸ್‌ಕೆ ಆಟಗಾರನಾಗಿ ಧೋನಿ ಭವಿಷ್ಯ ಅನಿಶ್ಚಿತ!

ದುಬೈ: ಚೆನ್ನೈ ಸೂಪರ್‌ಕಿಂಗ್ಸ್ ನಾಯಕ ಎಂಎಸ್ ಧೋನಿ ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಆಡುವರೇ ಎಂಬುದು 14ನೇ ಆವೃತ್ತಿ ಮುಕ್ತಾಯದ ಬಳಿಕವೂ ನಿಗೂಢವಾಗಿ ಉಳಿದಿದೆ. ಆದರೆ ಆಟಗಾರನಲ್ಲದಿದ್ದರೂ, ಮುಂದಿನ ವರ್ಷವೂ ಸಿಎಸ್‌ಕೆ ತಂಡದ ಜತೆಯಲ್ಲೇ ಇರುವೆ ಎಂಬುದನ್ನು ಸ್ಪಷ್ಟಪಡಿಸಿದ ಧೋನಿ, ಮುಂದಿನ 10 ವರ್ಷಗಳ ಅವಧಿಗೆ ಸಿಎಸ್‌ಕೆ ತಂಡದ ರೂಪುರೇಷೆ ಸಿದ್ಧಪಡಿಸಬೇಕಾಗಿದೆ ಎಂದರು.

ಮುಂದಿನ ವರ್ಷದ ಐಪಿಎಲ್‌ಗೆ ಮುನ್ನ ಆಟಗಾರರ ಮೆಗಾ ಹರಾಜಿಗೆ ಪೂರ್ವಭಾವಿಯಾಗಿ ಬಿಸಿಸಿಐ ಪ್ರಕಟಿಸುವ ರಿಟೇನ್ ನಿಯಮಾವಳಿಯ ಆಧಾರದಲ್ಲಿ ತಮ್ಮ ಭವಿಷ್ಯ ನಿರ್ಧಾರವಾಗಲಿದೆ ಎಂದಿರುವ ಧೋನಿ, ಮುಂದಿನ ಬಾರಿ ಚೆನ್ನೈನಲ್ಲಿ ಪಂದ್ಯ ಆಡುವ ಹಂಬಲವನ್ನೂ ವ್ಯಕ್ತಪಡಿಸಿದರು. ಆದರೆ ತಂಡಕ್ಕೆ ಆರ್ಥಿಕವಾಗಿ ಹೊಡೆತ ಎದುರಾಗದ ರೀತಿಯಲ್ಲಿ ಅವರ ಭವಿಷ್ಯ ನಿರ್ಧಾರವಾಗಲಿದೆ.

ಪುಟಿದೆದ್ದು ನಿಲ್ಲುವುದು ಯಾವಾಗಲೂ ಕಷ್ಟಕರವಾದುದು. ಕೆಕೆಆರ್ ತಂಡ ಅದನ್ನು ಸಾಧಿಸಿ ತೋರಿಸಿದೆ. ಐಪಿಎಲ್ ಗೆಲುವಿಗೆ ಅರ್ಹ ತಂಡವಿದ್ದರೆ ಅದು ಕೆಕೆಆರ್. ಕೋಚ್, ಆಟಗಾರರು ಮತ್ತು ತರಬೇತು ಸಿಬ್ಬಂದಿಗೆ ಶ್ರೇಯ ಸಲ್ಲಬೇಕು. ಟೂರ್ನಿ ನಡುವಿನ ಬಿಡುವು ಅವರಿಗೆ ನೆರವಾಗಿದೆ ಎಂದು ಧೋನಿ ಗೆಲುವಿನ ಬಳಿಕ ಎದುರಾಳಿಯನ್ನೂ ಹೊಗಳಿದ್ದು ವಿಶೇಷವಾಗಿತ್ತು.