ಕ್ರೀಡೆ

ಎದುರಾಳಿಗಿಂತ ದೇಹ ತೂಕದ ಜತೆ ಹೋರಾಡುವುದೇ ಒಂದು ದೊಡ್ಡ ಸವಾಲು

ನವದೆಹಲಿ: 2024ರ ಪ್ಯಾರಿಸ್ ​ಒಲಿಂಪಿಕ್ಸ್​ ಪದಕದಾಟದಲ್ಲಿ ಎರಡು ಚಿನ್ನದ ಪದಕ ಭಾರತಕ್ಕೆ ಸೇರಲಿದೆ ಎಂದೇ ಪ್ರತಿಯೊಬ್ಬ ಭಾರತೀಯ ಆಶಿಸಿದ್ದರು. ಆದ್ರೆ, ಅದರಲ್ಲಿ ಒಂದು ಕಣ್ಮರೆಯಾಗಿದ್ದು, ಇದು ಇಡೀ ದೇಶಕ್ಕೆ ದೊಡ್ಡ ಆಘಾತ ತಂದೊಡ್ಡಿದೆ. 50 ಕೆಜಿ ಮಹಿಳೆಯರ ಫೈನಲ್​ ಕುಸ್ತಿ ಪಂದ್ಯಕ್ಕೆ ಭರ್ಜರಿ ಗೆಲುವಿನೊಂದಿಗೆ ಲಗ್ಗೆಯಿಟ್ಟಿದ್ದ ಭಾರತದ ಕುಸ್ತಿಪಟು ವಿನೇಶ್​ ಫೋಗಟ್​, ಪಂದ್ಯ ಆರಂಭಕ್ಕೂ ಮುನ್ನ ದೇಹ ತೂಕದಲ್ಲಿ 50 ಕೆಜಿಗಿಂತ 100 ಗ್ರಾಂ ಹೆಚ್ಚಿದ್ದಾರೆ ಎಂಬ ಸಣ್ಣ ಕಾರಣಕ್ಕೆ ಅಂತಿಮ ಸುತ್ತಿನಿಂದ ಅನರ್ಹಗೊಂಡರು. ಈ ಸುದ್ದಿಗೆ ಇಡೀ ಕ್ರೀಡಾಲೋಕವೇ ಕಂಬನಿ ಮಿಡಿದಿದ್ದು, ಹಲವರು ತೀವ್ರ ಅಸಮಾಧಾನ ಕೂಡ ಹೊರಹಾಕಿದ್ದಾರೆ.

ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಿದ್ದಾರೆ ಎಂಬ ಕಾರಣಕ್ಕೆ ಫೈನಲ್​ ಪಂದ್ಯದಿಂದ ವಿನೇಶ್​ರನ್ನು ಐಒಸಿ ಅನರ್ಹಗೊಳಿಸಿತು. 100 ಗ್ರಾಂ ಹೆಚ್ಚಿದ್ದ ಕಾರಣಕ್ಕೆ ತನ್ನನ್ನು ಚಿನ್ನ ಗೆಲ್ಲುವ ಓಟದಿಂದ ದೂರವಿಟ್ಟರಲ್ಲಾ ಎಂಬ ದುಃಖವನ್ನು ಅರಗಿಸಿಕೊಳ್ಳಲಾಗದ ಫೋಗಟ್​, ಈ ಸೋಲನ್ನು ಹೇಗೆ ಒಪ್ಪಿಕೊಳ್ಳುವುದು ಎಂದು ವೇದಿಕೆಯಲ್ಲೇ ಕಣ್ಣೀರಿಟ್ಟರು. ತೂಕ ಇಳಿಸಲು ರಾತ್ರಿಯಿಡೀ ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದ್ದ ಫೋಗಟ್​, ಕಡೆಗೂ ಫೈನಲ್​ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ದೇಶವ್ಯಾಪಿ ಬೆನ್ನಲ್ಲೇ ಇದೀಗ ಜಾಗತಿಕ ಮಟ್ಟದಲ್ಲಿಯೂ ವಿನೇಶ್​ ಫೋಗಟ್​ರಿಗೆ ಅಭೂತಪೂರ್ವ ಬೆಂಬಲ ದೊರಕುತ್ತಿದ್ದು, ನೀವು ಅದ್ಭುತ ಚಾಂಪಿಯನ್​. ಇದು ನಿಮ್ಮ ದೊಡ್ಡ ಗೆಲುವು ಎಂದು ಅನೇಕರು ಚಾಂಪಿಯನ್ ಕುಸ್ತಿಪಟುವಿನ ಬೆನ್ನುತಟ್ಟಿ, ಪ್ರೋತ್ಸಾಹಿಸುತ್ತಿದ್ದಾರೆ. ಇನ್ನು ಫೈನಲ್​ನಲ್ಲಿ ವಿನೇಶ್​ ಎದುರಾಳಿಯಾಗಿದ್ದ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್, ಮಹಿಳೆಯರ ಫೈನಲ್​ ಕುಸ್ತಿ ಪಂದ್ಯದಲ್ಲಿ ಫೋಗಟ್​ ವಿರುದ್ಧ ಸೆಮಿಫೈನಲ್​ನಲ್ಲಿ ಸೋತಿದ್ದ ಗುಜ್ಮನ್ ಲೋಪೆಜ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

ಒಲಿಂಪಿಕ್ಸ್​ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ನಾಲ್ಕನೇ ಯುಎಸ್​ ಮಹಿಳೆಯಾಗಿ ಹೊರಹೊಮ್ಮಿದ ಸಾರಾ, ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿನೇಶ್​ ಅನರ್ಹಗೊಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. "ಎಲ್ಲವೂ ಸರಿಯಿದ್ದಿದ್ರೆ, ಇಂದು ನಾನು ಮತ್ತು ಫೋಗಟ್​ ಅವರು ಫೈನಲ್ ಪಂದ್ಯದಲ್ಲಿ ಸೆಣಸಾಡುತ್ತಿದ್ದೆವು. ಆದ್ರೆ, ಅವರನ್ನು ಅನರ್ಹಗೊಳಿಸಿದ್ದಾರೆ ಎಂಬ ಸುದ್ದಿ ನಿಜಕ್ಕೂ ಭಾರೀ ಬೇಸರ ಮೂಡಿಸಿದೆ. ದೇಹ ತೂಕದ ಜತೆ ಹೋರಾಡುವುದು ದೊಡ್ಡ ಸವಾಲು. ಅವರಂತೆಯೇ ನಾನು ಕೂಡ ತೂಕ ಇಳಿಕೆ ಮಾಡಲು ಬಹಳ ಕಸರತ್ತು ಮಾಡಿದ್ದೇನೆ" ಎಂದರು.

"ದೇಹ ತೂಕ ಇಳಿಸುವಲ್ಲಿ ನಾನು ಹರಸಾಹಸ ಪಟ್ಟಿರುವ ಹಿನ್ನಲೆ ನನಗೆ ವಿನೇಶ್​ರ ನೋವೇನು ಎಂಬುದು ಅರ್ಥವಾಗುತ್ತದೆ. ಪಂದ್ಯಕ್ಕೂ ಮುನ್ನ ವಿಭಿನ್ನ ಹಾಗೂ ವಿಚಿತ್ರ ರೀತಿಯಲ್ಲಿ ತೂಕ ಇಳಿಕೆಗೆ ಶ್ರಮಿಸಿದ್ದೇನೆ. ಆದ್ರೆ, ಫೋಗಟ್​ರಿಗೆ ಇಂತಹ ಸೋಲು ನಿಜಕ್ಕೂ ಸೂಕ್ತವಲ್ಲ. ಅವರೊಬ್ಬರು ಅದ್ಭುತ ಚಾಂಪಿಯನ್​, ಬಲಿಷ್ಠ ಸ್ಪರ್ಧಿ. ಎಲ್ಲದಕ್ಕಿಂತ ಒಳ್ಳೆಯ ಮನಸ್ಸಿನ ವ್ಯಕ್ತಿ. ಅವರಿಗಾಗಿ ನನ್ನ ಮನ ಮಿಡಿಯುತ್ತಿದೆ" ಎಂದು ಭಾವುಕರಾಗಿಯೇ ಮಾತನಾಡಿದರು,(ಏಜೆನ್ಸೀಸ್).