ಕ್ರೀಡೆ

ಭಾರತ ಸೋಲುವುದನ್ನು ನನ್ನಿಂದ ನೋಡಲು ಸಾಧ್ಯವಿಲ್ಲ; ಇಂಗ್ಲೆಂಡ್​ ಗೆಲ್ಲಬೇಕೆಂದರೆ ಇದೊಂದರ ಅವಶ್ಯಕತೆಯಿದೆ ಎಂದ ಮಾಜಿ ಕ್ರಿಕೆಟಿಗ

ನವದೆಹಲಿ: ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುತ್ತಿರುವ 09ನೇ ಆವೃತ್ತಿಯ ಟಿ20 ವಿಶ್ವಕಪ್​ ಮುಕ್ತಾಯದ ಹಂತಕ್ಕೆ ಬಂದಿದ್ದು, ಜೂನ್​ 27ರಂದು ಸೆಮಿಫೈನಲ್​ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಟೀಮ್​ ಇಂಡಿಯಾ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ಸವಾಲನ್ನು ಎದುರಿಸಲಿದ್ದು, ಟೀಮ್​​ ಇಂಡಿಯಾ 2022ರ ಸೆಮಿಫೈನಲ್​ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗುತ್ತಿದೆ.

ಇತ್ತ ಟೀಮ್​ ಇಂಡಿಯಾ ಸೆಮಿಫೈನಲ್​ ಪ್ರವೇಶಿಸುತ್ತಿದ್ದಂತೆ ಮಾಜಿ ಆಟಗಾರರು ಶುಭ ಕೋರುತ್ತಿದ್ದು, ಇಂಗ್ಲೆಂಡ್​ ತಂಡದ ಮಾಜಿ ಆಲ್ರೌಂಡರ್​ ಪೌಲ್​ ಡೇವಿಡ್​ ಕಾಲಿಂಗ್​ವುಡ್​ ಭಾರತ ಸೋಲುವುದನ್ನು ನನ್ನಿಂದ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಕಾಲಿಂಗ್​ವುಡ್​, ಪ್ರಾಮಾಣಿಕವಾಗಿ ಹೇಳಬೇಕಾದರೆ ಭಾರತ ಈ ಬಾರಿ ಸೋಲುವುದನ್ನು ನನ್ನ ಕೈಯಲ್ಲಿ ನೋಡಲು ಸಾಧ್ಯವಿಲ್ಲ. ಒಂದು ವೇಳೆ ಭಾರತವನ್ನು ಮಣಿಸಬೇಕೆಂದರೆ ಇಂಗ್ಲೆಂಡ್​ಗೆ ಅಸಾಮಾನ್ಯವಾದದ್ದೇನಾದರೂ ಅಗತ್ಯವಿದೆ. ಪ್ರಸ್ತುತ ಟೀಮ್​ ಇಂಡಿಯಾ ಆಡುತ್ತಿರುವ ರೀತಿ ನೋಡಿದರೆ ನನಗೆ ಹಾಗೆ ಅನ್ನಿಸುತ್ತಿದೆ. ಅವರು ಕಪ್​ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ.

ತಂಡದ ಸಂಯೋಜನೆ, ಜಸ್ಪ್ರೀತ್​ ಬುಮ್ರಾ ಫಾರ್ಮ್​, ಅಮರೆಕದಂತಹ ಪಿಚ್​ಗಳಲ್ಲಿ ಭಾರತ ವಿಶ್ವಾಸದೊಂದಿಗೆ ಆಟವಾಡಿದ ರೀತಿ ನೋಡಿದರೆ ಖುಷಿ ಕೊಡುತ್ತದೆ. ಆಸ್ಟ್ರೇಲಿಯಾ ವಿರುದ್ಧ ರೋಹಿತ್​ ಶರ್ಮಾ ಆಡಿದ ರೀತಿ ಮತ್ತು ತಂಡದ ಇತರೆ ಸದಸ್ಯರು ನೀಡುತ್ತಿರುವ ಪ್ರದರ್ಶನ ನೋಡಿದರೆ ಭಾರತ ಕಪ್​ ಗೆಲ್ಲುವುದು ಪಕ್ಕಾ. ಗಯಾನಾದ ಪಿಚ್​ ಭಾರತಕ್ಕೆ ಹೆಚ್ಚು ಸಹಕಾರಿಯಾಗಲಿದ್ದು, ಇಂಗ್ಲೆಂಡ್​ ತಂಡವು ವಿಶೇಷವಾಗಿ ಏನ್ನನಾದರೂ ರೂಪಿಸಬೇಕಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಆಡುವ ವಿಧಾನ ಬದಲಾಗಿದ್ದು, ತಾವು ಅನುಸರಿಸುತ್ತಿದ್ದ ಹಳೆಯ ತಂತ್ರಗಳು ವಿಶ್ವಕಪ್​ನಲ್ಲಿ ವರ್ಕೌಟ್​ ಆಗುವುದಿಲ್ಲ ಎಂಬ ವಿಚಾರ ಅವರು ತಿಳಿದುಕೊಂಡಿದ್ದಾರೆ. ಹೀಗಾಗಿ ನನ್ನ ಪ್ರಕಾರ ನಾಳೆ (ಜೂನ್ 27) ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಯಾವುದೇ ಕಾರಣಕ್ಕೂ ಸೋಲಬಾರದು ಎಂದು ಇಂಗ್ಲೆಂಡ್​ ಕ್ರಿಕೆಟ್​ ತಂಡದ ಮಾಜಿ ಆಟಗಾರ ಪೌಲ್​ ಡೇವಿಡ್​ ಕಾಲಿಂಗ್​ವುಡ್​ ಅಭಿಪ್ರಾಯಪಟ್ಟಿದ್ದಾರೆ.