ಕ್ರೀಡೆ

Syed Kirmani | ಕ್ರೀಡೆಯಲ್ಲಿ ರಾಜಕೀಯ ಬೆರೆಸಬೇಡಿ..ಇಂಡಿಯಾ, ಪಾಕ್​ ತಂಡದ ಆಟಗಾರರ ವರ್ತನೆಯಿಂದ ನಾಚಿಕೆಯಾಗುತ್ತಿದೆ ಎಂದ ಸೈಯದ್ ಕಿರ್ಮಾನಿ !

Syed Kirmani: ಇತ್ತೀಚಿನ ಕ್ರಿಕೆಟ್‌ನಲ್ಲಿ ಕ್ರೀಡಾ ಮನೋಭಾವದ ಕೊರತೆ ಎದ್ದು ಕಾಣುತ್ತಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ ರಾಜಕೀಯ ಬೆರೆಸಲಾಗಿದೆ ಎಂದು ನನ್ನ ಸ್ನೇಹಿತರು ಮಾತನಾಡುವುದನ್ನು ಕೇಳಲು ನಾಚಿಕೆಯಾಗುತ್ತಿದೆ ಎಂದು ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಹೇಳಿದ್ದಾರೆ.

ಒಂದು ತಿಂಗಳ ಕಾಲ ನಡೆದ ಏಷ್ಯಾ ಕಪ್ ಟೂರ್ನಿ, ಕ್ರಿಕೆಟ್​ ಗುಣಮಟ್ಟಕ್ಕಿಂತ ಮೈದಾನದ ಹೊರಗೆ ನಾಟಕೀಯತೆಗೇ ಹೆಚ್ಚು ಸದ್ದು ಮಾಡಿತು.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಿರ್ಮಾನಿ, ಕ್ರಿಕೆಟ್​​ನಲ್ಲಿ ಮೊದಲಿನಂತೆ ಸಜ್ಜನಿಕೆ ಇಲ್ಲ. ಮೈದಾನದಲ್ಲಿ ತುಂಬಾ ಅಸಭ್ಯ ವರ್ತನೆ, ದುರಹಂಕಾರದ ಸನ್ನೆಗಳೇ ಕಾಣಸಿಗುತ್ತವೆ, ನನಗೆ ಎಲ್ಲೆಡೆಯಿಂದ ಸಂದೇಶಗಳು ಬರುತ್ತಿದ್ದು, ಭಾರತ ತಂಡ ಏನು ಮಾಡುತ್ತಿದೆ..? ಮೈದಾನದಲ್ಲಿ ಯಾವ ಮಟ್ಟದ ರಾಜಕೀಯ ನಡೆಯುತ್ತಿದೆ.? ಎಂದು ಅವಮಾನ ಮಾಡುತ್ತಿದ್ದಾರೆ, ಈ ಎಲ್ಲ ಟೀಕೆಗಳನ್ನು ಕೇಳಲು ನನಗೆ ನಾಚಿಕೆಯಾಗುತ್ತದೆ ಎಂದು ತಿಳಿಸಿದರು.

ನಿಮ್ಮ ಗೆಲುವನ್ನು ರಾಜಕೀಯಕ್ಕೆ ಸಂಬಂಧಿಸಬೇಡಿ..

ತಮ್ಮ ಅವಧಿಯಲ್ಲಿನ ಭಾರತ-ಪಾಕಿಸ್ತಾನ ನಡುವಿನ ಪೈಪೋಟಿಯನ್ನು ನೆನಪಿಸಿಕೊಂಡ ಕಿರ್ಮಾನಿ, ಆಟಗಾರರು ರಾಜಕೀಯ ಉದ್ವಿಗ್ನತೆಗಳನ್ನು ಮೀರಿ ಉತ್ತಮ ಮನೋಭಾವದಿಂದ ಆಟವಾಡುತ್ತಿದ್ದರು, ಕ್ರೀಡಾ ಕ್ಷೇತ್ರದ ಹೊರಗೆ ಏನೇ ನಡೆದಿದ್ದರೂ, ಅದನ್ನು ಅಲ್ಲಿಯೇ ಬಿಡಿ. ಅದನ್ನು ನಿಮ್ಮ ಗೆಲುವಿನೊಂದಿಗೆ ಮತ್ತು ಕ್ರಿಕೆಟ್ ಆಟದಿಂದ ನೀವು ಗಳಿಸುತ್ತಿರುವ ಯಾವುದೇ ಸಂಗತಿಯೊಂದಿಗೆ ಹೋಲಿಸಬೇಡಿ. ನಮ್ಮ ಕಾಲದಲ್ಲಿ ಕ್ರಿಕೆಟಿಗರು ಅದ್ಭುತವಾದ ಸೌಹಾರ್ದತೆಯನ್ನು ಹೊಂದಿದ್ದರು, ಪಾಕ್​ ಆಟಗಾರರು ಭಾರತಕ್ಕೆ ಬರುತ್ತಿದ್ದರು, ನಾವು ಪಾಕಿಸ್ತಾನಕ್ಕೆ ಹೋಗುತ್ತಿದ್ದೆವು. ಎಂತಹ ಆತಿಥ್ಯ, ಎಂತಹ ಪ್ರೀತಿ, ಎಂತಹ ವಾತ್ಸಲ್ಯ. ಇಂದು ಒಬ್ಬ ಕ್ರಿಕೆಟಿಗನಾಗಿ ನಾನು ನನ್ನ ತಲೆ ತಗ್ಗಿಸುವಂತಾಗಿದೆ ಎಂದರು.

ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ನೀಡಲಿಲ್ಲವಾದರೂ, ಇತರ ತಂಡಗಳ ಪ್ರದರ್ಶನದ ಮೇಲೆ ಫೈನಲ್​ ತಲುಪಿತು, ಮೂರು ಬಾರಿ ಎದುರು ಬದುರಾದ ಉಭಯ ತಂಡಗಳು, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಚಕಮಕಿಯನ್ನು ಉಲ್ಲೇಖಿಸಿ ಎರಡು ದೇಶದ ಆಟಗಾರರು ಪ್ರಚೋದನಕಾರಿ ಸನ್ನೆಗಳ ಮೂಲಕ ಒಬ್ಬರೊಬ್ಬರನ್ನು ಕೆಣಕಿದರು. ಭಾರತೀಯ ಆಟಗಾರರು ಪಾಕ್​​ನ ಕ್ರಿಯೆಗೆ ತಕ್ಕ ಪತಿಕ್ರಿಯೆಯನ್ನೇ ನೀಡಿದರು.

ಫೈನಲ್ ಪಂದ್ಯದ ನಂತರ ಚಾಂಪಿಯನ್ ತಂಡ ಭಾರತ, ಗೆಲುವಿನ ಟ್ರೋಫಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಸ್ವೀಕರಿಸಲು ನಿರಾಕರಿಸಿದ ವೇಳೆ ಈ ಬೆಳವಣಿಗೆ ಹೆಚ್ಚು ಕಾವೂ ಪಡೆದುಕೊಂಡಿತು. ನಖ್ವಿ ಪಂದ್ಯಾವಳಿಯ ಮಧ್ಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಚೋದನಕಾರಿ ಪೋಸ್ಟ್ ಮೈದಾನದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು ಎನ್ನಲಾಗಿದೆ. ಟೀಮ್​ ಇಂಡಿಯಾ ಟ್ರೋಪಿ ನಿರಾಕರಣೆಯ ನಂತರ ಪಿಸಿಬಿ ಮುಖ್ಯಸ್ಥ ಅದನ್ನು ಮರಳಿ ತೆಗೆದುಕೊಂಡು ಹೊರಟುಹೋದರು ಎಂದು ಹೇಳಲಾಗುತ್ತಿದೆ.

ಪಹಲ್ಗಾಮ್ ದಾಳಿ ಮತ್ತು ಏಷ್ಯಾಕಪ್ ಸಮಯದಲ್ಲಿ ನಡೆದ ಗಡಿಯಾಚೆಗಿನ ಹಗೆತನದ ನಂತರ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮೈದಾನದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾದವು.(ಏಜೆನ್ಸೀಸ್​​)