ಕ್ರೀಡೆ

ಹುಬ್ಬಳ್ಳಿ ಟೈಗರ್ಸ್‌ಗೆ ಮಹಾರಾಜ ಟ್ರೋಫಿ: ಮಿಂಚಿದ ಮೊಹಮದ್ ತಾಹ, ನಾಯಕ ಮನೀಷ್ ಪಾಂಡೆ

ಬೆಂಗಳೂರು: ಬ್ಯಾಟರ್ ಮೊಹಮದ್ ತಾಹ (72 ರನ್, 40 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕ ಮನೀಷ್ ಪಾಂಡೆ (50* ರನ್, 23 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಬಲ ಮತ್ತು ವೇಗಿ ಮನ್ವಂತ್ ಕುಮಾರ್ (32ಕ್ಕ 3) ಕೊನೇ ಓವರ್‌ನ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಮೈಸೂರು ವಾರಿಯರ್ಸ್‌ ಎದುರು 8 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟವೇರಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ರೋಚಕ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹುಬ್ಬಳ್ಳಿ ತಂಡ 8 ವಿಕೆಟ್‌ಗೆ 203 ರನ್ ಪೇರಿಸಿತು. ಹುಬ್ಬಳ್ಳಿ ಪರ 2ನೇ ವಿಕೆಟ್‌ಗೆ ಜತೆಯಾದ ಮೊಹಮದ್ ತಾಹ ಹಾಗೂ ಶ್ರೀಜೀತ್ 59 ಎಸೆತಗಳಲ್ಲಿ 89 ರನ್ ಬಾರಿಸಿ ಉತ್ತಮ ಅಡಿಪಾಯ ಒದಗಿಸಿದರು. ಬಳಿಕ ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಮನೀಷ್ ಪಾಂಡೆ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.ಪ್ರತಿಯಾಗಿ ಮೈಸೂರು ತಂಡ ಆರ್. ಸಮರ್ಥ್ (63 ರನ್, 35 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಎಸ್‌ಯು ಕಾರ್ತಿಕ್ (28) ಉತ್ತಮ ಆರಂಭದ ನಡುವೆಯೂ, 8 ವಿಕೆಟ್‌ಗೆ 195 ರನ್‌ಗಳಿಸಲಷ್ಟೇ ಶಕ್ತವಾಯಿತು. 2ನೇ ವಿಕೆಟ್‌ಗೆ ಕರುಣ್ ನಾಯರ್ (37) ಹಾಗೂ ಸಮರ್ಥ್ 55 ರನ್‌ಗಳ ಹೋರಾಟ ಫಲ ನೀಡಲಿಲ್ಲ.

ಮನ್ವಂತ್ ಮ್ಯಾಜಿಕ್: ಅಂತಿಮ ಓವರ್‌ನಲ್ಲಿ ಮೈಸೂರಿಗೆ 12 ರನ್ ಅಗತ್ಯವಿದ್ದಾಗ ದಾಳಿಗಿಳಿದ ಯುವ ವೇಗಿ ಮನ್ವಂತ್ ಕುಮಾರ್ (ವಿಕೆಟ್, 1ಲೆಗ್ ಬೈ, 1, 1ಬೈ, ವಿಕೆಟ್, 0) ಮೊದಲ ಎಸೆತದಲ್ಲಿ ಎಸ್. ರಕ್ಷಿತ್ (13) ವಿಕೆಟ್ ಕಬಳಿಸಿದರೆ, 5ನೇ ಎಸೆತದಲ್ಲಿ ಅನುಭವಿ ಜೆ. ಸುಚಿತ್ (13) ವಿಕೆಟ್ ಕೆಡವಿದರು. ಅಂತಿಮ ಓವರ್‌ನಲ್ಲಿ ಕೇವಲ 3 ರನ್ ನೀಡಿ ಜಯದ ರೂವಾರಿ ಎನಿಸಿದರು.

ಹುಬ್ಬಳ್ಳಿ ಟೈಗರ್ಸ್‌: 8 ವಿಕೆಟ್‌ಗೆ 203 (ಲವನೀತ್ ಸಿಸೋಡಿಯಾ 0, ಮೊಹಮದ್ ತಾಹ 72, ಕೆ. ಶ್ರೀಜೀತ್ 38, ಸಂಜಯ್ 16, ಮನೀಷ್ ಪಾಂಡೆ 50*, ಪ್ರವೀಣ್ ದುಬೆ 4, ಮನ್ವಂತ್ 14, ಸಿಎ ಕಾರ್ತಿಕ್ 33ಕ್ಕೆ 2, ಜೆ. ಸುಚಿತ್ 24ಕ್ಕೆ 1).

ಮೈಸೂರು ವಾರಿಯರ್ಸ್‌: ಎಸ್‌ಯು ಕಾರ್ತಿಕ್ 28, ಆರ್. ಸಮರ್ಥ್ 63, ಕರುಣ್ ನಾಯರ್ 37, ಲಂಕೇಶ್ 13, ಜೆ. ಸುಚಿತ್ 13, ಎಸ್. ರಕ್ಷಿತ್ 13, ಮನ್ವಂತ್ 32ಕ್ಕೆ3, ವಿದ್ವತ್ 40ಕ್ಕೆ2). ಗರಿಷ್ಠ 532 ರನ್: ಕರುಣ್ ನಾಯರ್ (ಮೈಸೂರು)ಗರಿಷ್ಠ 22 ವಿಕೆಟ್: ಮನ್ವಂತ್ ಕುಮಾರ್ (ಹುಬ್ಬಳ್ಳಿ)