ಕ್ರೀಡೆ

ಹುಬ್ಬಳ್ಳಿ ಟೈಗರ್ಸ್‌ಗೆ ಹ್ಯಾಟ್ರಿಕ್ ಜಯ: ಮಯಾಂಕ್ ಬಳಗಕ್ಕೆ ಸತತ ಮೂರನೇ ಸೋಲು

ಬೆಂಗಳೂರು: ಗೆಲುವಿನ ಓಟ ವಿಸ್ತರಿಸಿದ ಹುಬ್ಬಳ್ಳಿ ಟೈಗರ್ಸ್‌ ತಂಡ ಯುವ ಪ್ರತಿಭೆ ಮನ್ವಂತ್ ಕುಮಾರ್ (28 ರನ್, 19 ಎಸೆತ, 3 ಬೌಂಡರಿ, 1 ಸಿಕ್ಸರ್ ಹಾಗೂ 15ಕ್ಕೆ 4 ವಿಕೆಟ್) ಆಲ್ರೌಂಡ್ ಆಟದ ನೆರವಿನಿಂದ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಎದುರು 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಮನೀಷ್ ಪಾಂಡೆ ಬಳಗ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಮಯಾಂಕ್ ಅಗರ್ವಾಲ್ ಸಾರಥ್ಯದ ಹಾಲಿ ರನ್ನರ್‌ಅಪ್ ಬೆಂಗಳೂರು ತಂಡ ಸತತ 3ನೇ ಸೋಲು ಕಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಯಾಂಕ್ ಅಗರ್ವಾಲ್ (50 ರನ್, 34 ಎಸೆತ,6 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 18.4 ಓವರ್‌ಗಳಲ್ಲಿ 105 ರನ್‌ಗಳಿಗೆ ಸರ್ವಪತನ ಕಂಡಿತು. ಬೆಂಗಳೂರು ಪರ ಮಯಾಂಕ್, ಭುವನ್ ರಾಜು (11) ಹಾಗೂ ಸೂರಜ್ ಅಹುಜಾ (14) ಹೊರತುಪಡಿಸಿ ಇತರ ಬ್ಯಾಟರ್‌ಗಳು ಎರಡಂಕಿ ಮೊತ್ತ ಪೇರಿಸಲು ವಿಲರಾದರು. ಪ್ರತಿಯಾಗಿ ಹುಬ್ಬಳ್ಳಿ ಟೈಗರ್ಸ್‌ ತಂಡ 13.3 ಓವರ್‌ಗಳಲ್ಲಿ 5 ವಿಕೆಟ್‌ಗೆ 111 ರನ್ ಪೇರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.

ಸಾಧಾರಣ ಮೊತ್ತ ಬೆನ್ನಟ್ಟಿದ ಹುಬ್ಬಳ್ಳಿ ಪರ ಎಡಗೈ ಬ್ಯಾಟರ್ ಲವನೀತ್ ಸಿಸೋಡಿಯಾ (33) ಹಾಗೂ ಮೊಹಮದ್ ತಾಹ (10) ಉತ್ತಮ ಬುನಾದಿ ಹಾಕಿಕೊಟ್ಟರು. ಮೊದಲ ವಿಕೆಟ್‌ಗೆ 44 ರನ್ ಪೇರಿಸಿದರು. ನಂತರ ಮನೀಷ್ ಪಾಂಡೆ (23*) ಮತ್ತು ಮನ್ವಂತ್ ಕುಮಾರ್ 5ನೇ ವಿಕೆಟ್‌ಗೆ 42 ರನ್ ಪೇರಿಸಿ ಗೆಲುವು ಸುಲಭಗೊಳಿಸಿದರು. 1 ರನ್ ಅಗತ್ಯವಿದ್ದಾಗ ಮನೀಷ್ ಸಿಕ್ಸರ್ ಸಿಡಿಸಿ ತಂಡದ ಗೆಲುವು ಸಾರಿದರು.

ಬೆಂಗಳೂರು ಬ್ಲಾಸ್ಟರ್ಸ್‌: 18.4 ಓವರ್‌ಗಳಲ್ಲಿ 105 (ಭುವನ್ 11, ಮಯಾಂಕ್ 50, ಜೆಶ್ವಂತ್ 7, ಪವನ್ ದೇಶಪಾಂಡೆ 1, ಸೂರಜ್ 14, ಶುಭಾಂಗ್ 7*, ಮನ್ವಂತ್ 15ಕ್ಕೆ4, ಪ್ರವೀಣ್ ದುಬೆ 22ಕ್ಕೆ2).

ಹುಬ್ಬಳ್ಳಿ ಟೈಗರ್ಸ್‌: 13.3 ಓವರ್‌ಗಳಲ್ಲಿ 5 ವಿಕೆಟ್‌ಗೆ 111 (ಲವನೀತ್ 33, ತಾಹ 10, ಕೆ. ಶ್ರೀಜೀತ್ 8, ಮನೀಷ್ ಪಾಂಡೆ 23*, ಮನ್ವಂತ್ 28, ಪ್ರವೀಣ್ 2*, ರ್ಸ್ರಾಜ್ ಆಶ್ರ್ 22ಕ್ಕೆ2, ಎಲ್‌ಆರ್ ಕುಮಾರ್ 9ಕ್ಕೆ 1). ಪಂದ್ಯಶ್ರೇಷ್ಠ: ಮನ್ವಂತ್ ಕುಮಾರ್.

ನಾಳೆಯ ಪಂದ್ಯಗಳು

ಗುಲ್ಬರ್ಗಾ ಮಿಸ್ಟಿಕ್ಸ್- ಶಿವಮೊಗ್ಗ ಲಯನ್ಸ್

ಆರಂಭ: ಮಧ್ಯಾಹ್ನ 1 ಕ್ಕೆ

ಹುಬ್ಬಳ್ಳಿ ಟೈಗರ್ಸ್‌-ಮಂಗಳೂರು ಡ್ರ್ಯಾಗನ್ಸ್

ಆರಂಭ: ಸಂಜೆ 5.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.