ನ್ಯೂಯಾರ್ಕ್: ಅಮೆರಿಕದಲ್ಲಿ ಮತ್ತೊಮ್ಮೆ ವರ್ಣಭೇದದ ವಿರುದ್ಧ ಹೋರಾಟ ತೀವ್ರಗೊಂಡಿದೆ. ಇದರಿಂದಾಗಿ ಗುರುವಾರ ನ್ಯೂಯಾರ್ಕ್ ನಗರದಲ್ಲಿ ನಿಗದಿಯಾಗಿದ್ದ ಹಲವು ಕ್ರೀಡಾ ಸ್ಪರ್ಧೆಗಳು ರದ್ದುಗೊಂಡಿವೆ. ಕಪ್ಪು ವರ್ಣಿಯ ಜಾಕಬ್ ಬ್ಲೇಕ್ ಅವರನ್ನು ಆಗಸ್ಟ್ 23 ರಂದು ಸ್ಥಳೀಯ ಪೊಲೀಸರು ಶೂಟ್ ಮಾಡಿದ್ದನ್ನು ಪ್ರತಿಭಟಿಸಿ, 2018ರ ಯುಎಸ್ ಓಪನ್ ಚಾಂಪಿಯನ್ ನವೊಮಿ ಒಸಾಕ, ಗುರುವಾರ ನಿಗದಿಯಾಗಿದ್ದ ವೆಸ್ಟರ್ನ್ ಹಾಗೂ ಸದರ್ನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅಲ್ಲದೆ, ಮೂರು ಎನ್ಬಿಎ ಪ್ಲೇ-ಆಫ್ ಪಂದ್ಯಗಳು, ಮೂರು ಪ್ರಮುಖ ಬೇಸ್ಬಾಲ್ ಪಂದ್ಯಗಳು, ಫುಟ್ಬಾಲ್ ಪಂದ್ಯಗಳು ಮುಂದೂಡಿಕೆಯಾಗಿವೆ.
ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಗೆ ಪೂರ್ವಾಭ್ಯಾಸದಂತೆ ನಡೆಯಲಿರುವ ವೆಸ್ಟರ್ನ್ ಹಾಗೂ ಸದರ್ನ್ ಓಪನ್ ಟೆನಿಸ್ ಟೂರ್ನಿಗೆ ವರ್ಣಭೇದ ಪ್ರತಿಭಟನೆ ಬಿಸಿ ತಟ್ಟಿದೆ. ಜಾಕಬ್ ಬ್ಲೇಕ್ ನಿಧನದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ನವೊಮಿ ಒಸಾಕ, ಕ್ರೀಡಾಪಟುವಿಗೂ ಮುನ್ನ ನಾನೊಬ್ಬಳು ಕಪ್ಪು ಮಹಿಳೆ. ಇದೇ ಅಲ್ಲಿ ಪ್ರಮುಖವಾಗಿದೆ. ನಾನು ಆಡದಿರುವುದರಿಂದ ಯಾವುದೇ ದೊಡ್ಡ ಬದಲಾವಣೆ ಸಾಧ್ಯವಿಲ್ಲ. ಆದರೆ, ಉತ್ತಮ ರೀತಿಯಲ್ಲಿ ಸಾಗುವುದೇ ನನ್ನ ಉದ್ದೇಶ ಎಂದು ಒಸಾಕ ಹೇಳಿದ್ದಾರೆ.
ದಿನದಾಟದ ಪಂದ್ಯಗಳು ರದ್ದುಗೊಂಡ ಕುರಿತು ಜಂಟಿ ಹೇಳಿಕೆ ಹೊರಡಿಸಿರುವ ಯುಎಸ್ಟಿಎ, ಎಟಿಪಿ ಟೂರ್ ಹಾಗೂ ಡಬ್ಲ್ಯುಟಿಎ, ಟೆನಿಸ್ ಯಾವಾಗಲೂ ವರ್ಣಭೇದ, ಜನಾಂಗೀಯ ಅಸಮಾನತೆ ವಿರುದ್ಧವಾಗಿರುತ್ತದೆ ಎಂದು ತಿಳಿಸಿವೆ.