ಕ್ರೀಡೆ

1 ಗ್ಲಾಸ್​ ಜ್ಯೂಸ್​… ಒಲಿಂಪಿಕ್ ಫೈನಲ್​ ಹಿಂದಿನ ರಾತ್ರಿ ನಡೆದಿದ್ದೇನು? ಅಚ್ಚರಿ ಮೂಡಿಸುತ್ತೆ ಈ ವರದಿ

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್ 2024ರ ಪದಕದಾಟದಲ್ಲಿ ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಭಾರತೀಯ ಕುಸ್ತಿಪಟು ವಿನೇಶ್​ ಫೋಗಟ್​ರನ್ನು ಫೈನಲ್​ ಪಂದ್ಯದಿಂದ ಐಒಸಿ ಅನರ್ಹಗೊಳಿಸಿತು. ಇದರಿಂದ ವಿನೇಶ್​ರಿಗೆ ಯಾವ ಪದಕವು ದೊರಕಲಿಲ್ಲ. ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ಫೋಗಟ್​ ಆ.7ರಂದು ಸಿಎಎಸ್​ ನ್ಯಾಯಾಲಯದಲ್ಲಿ ತಾನು ಎರಡು ಬೆಳ್ಳಿ ಪದಕಕ್ಕೆ ಅರ್ಹ ಎಂದು ಮನವಿ ಸಲ್ಲಿಸಿದ್ದರು. ತೀರ್ಪನ್ನು ಆ.16ರಂದು ತಿಳಿಸುತ್ತೇವೆ ಎಂದಿದ್ದ ನ್ಯಾಯಾಲಯ ಇದೀಗ ಅನರ್ಹತೆ ವಿರುದ್ಧ ಪ್ರಶ್ನಿಸಿ, ವಿನೇಶ್​ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಎರಡು ಪದಕ ಸಿಗದಿದ್ದರೂ ಒಂದು ಬೆಳ್ಳಿ ಪದಕ ಖಂಡಿತ ಅವರ ಪಾಲಾಗಲಿದೆ. ಫೋಗಟ್​​ರ ಶ್ರಮಕ್ಕೆ ನ್ಯಾಯ ಸಿಗುವುದು ಖಚಿತ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದ್ರೆ, ಕೋರ್ಟ್​ ಭಾರತೀಯರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.

ವಿನೇಶ್​ ಫೋಗಟ್​ ಸಲ್ಲಿಸಿದ್ದ ಅರ್ಜಿಯನ್ನು ಸಿಎಎಸ್​ ನ್ಯಾಯಾಲಯ ವಜಾಗೊಳಿಸುತ್ತಿದ್ದಂತೆ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬರಬೇಕಿದ್ದ 7ನೇ ಪದಕ ಆಸೆ ಕಡೆಗೂ ಭಗ್ನಗೊಂಡಿತು. ಈ ಆಘಾತಕಾರಿ ಸುದ್ದಿ ಕೇಳಿ ಭಾರತೀಯರು ತೀವ್ರ ಅಸಮಾಧಾನಗೊಂಡಿದ್ದಾರೆ. ಭಾರತದ ಹೆಮ್ಮೆಯ ಕುಸ್ತಿಪಟು ವಿನೇಶ್​ರಿಗೆ ಬೆಳ್ಳಿ ಪದಕ ದೊರೆಯಲಿ, ಅವರು ಅದಕ್ಕೆ ಅರ್ಹರು ಎಂದು ಕ್ರೀಡಾಪಟುಗಳಿಂದ ಹಿಡಿದು ಸಿನಿಮಾ ತಾರೆಯರು ಆಶಿಸಿದ್ದರು. ಈಗ ಆ ಎಲ್ಲಾ ಭರವಸೆಗಳು ಹುಸಿಯಾಗಿವೆ. ಅಷ್ಟಕ್ಕೂ ಒಲಿಂಪಿಕ್ ಫೈನಲ್​ ಹಿಂದಿನ ರಾತ್ರಿ ನಡೆದಿದ್ದೇನು? ಒಂದು ರಾತ್ರಿ ಕಳೆಯುವಷ್ಟರೊಳಗೆ ಫೋಗಟ್​ ದೇಹದ ತೂಕದಲ್ಲಿ ದಿಢೀರ್​ 2.7 ಕೆಜಿ ಹೆಚ್ಚಾಗಲು ಕಾರಣವೇನು? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ತನ್ನ ಪ್ಯಾರಿಸ್ ಒಲಿಂಪಿಕ್ಸ್ 2024ರ ಪಂದ್ಯಗಳನ್ನು ಪ್ರಾರಂಭಿಸುವ ಮೊದಲು 50 ಕೆಜಿ ತೂಕದ ಮಿತಿಯ ಅಡಿಯಲ್ಲಿ ದೇಹದ ತೂಕವನ್ನು ಸಮತೋಲನವಾಗಿರಿಸಿಕೊಂಡಿದ್ದ ವಿನೇಶ್, ಈ ​​ಹಿಂದೆ 82 ಅಂತಾರಾಷ್ಟ್ರೀಯ ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ಸೋಲದ ವಿಶ್ವದ ನಂಬರ್​ ಒನ್​ ಕುಸ್ತಿಪಟು​, ಜಪಾನ್‌ನ ಯುಯಿ ಸುಸಾಕಿ ಅವರನ್ನು ಮಣಿಸಿ, ಮಹಿಳೆಯರ ಕುಸ್ತಿ ವಿಭಾಗದ ಫೈನಲ್ ಹಂತವನ್ನು ಅತ್ಯಂತ ಯಶಸ್ವಿಯಾಗಿ ತಲುಪಿದ್ದರು. ಫೋಗಟ್​ರ ಈ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಅಭಿನಂದನೆಗಳು ವ್ಯಕ್ತವಾಗಿತ್ತು. ಇನ್ನು ಫೈನಲ್​ಗೆ ತಯಾರಿ ನಡೆಸಿದ್ದ ವಿನೇಶ್​, ಹಿಂದಿನ ರಾತ್ರಿ ಸೇವಿಸಿದ ಆಹಾರಗಳೇ ಅವರ ದೇಹದ ತೂಕದಲ್ಲಿ ದಿಢೀರ್​ 2.7 ಕೆಜಿ ಹೆಚ್ಚಳಕ್ಕೆ ಕಾರಣವಾಯಿತು ಎಂದು ವರದಿಯೊಂದು ಉಲ್ಲೇಖಿಸಿದೆ.

ಒಂದೇ ದಿನದಲ್ಲಿ 49.9- 52.7 ಕೆಜಿ ತೂಕ ಹೆಚ್ಚಿಸಿಕೊಂಡಿದ್ದು ಹೇಗೆ?

ಒಲಿಂಪಿಕ್​ ಸ್ಪರ್ಧೆಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ತಮ್ಮ ದೇಹದ ತೂಕದ ಜತೆ ಹೋರಾಡುವುದೇ ಮೊದಲ ಗೆಲುವು. ಆನಂತರ ಎದುರಾಳಿ ವಿರುದ್ಧ ಗೆದ್ದು ಬೀಗುವುದು ಇತಿಹಾಸ. ಅದರಲ್ಲೂ ಫೈನಲ್​ ಹಂತವನ್ನು ತಲುಪಿದ ಬಳಿಕ ತೂಕವನ್ನು ಸಮತೋಲನದಲ್ಲಿರಿಸಿಕೊಳ್ಳುವುದು ಬಹಳ ಕಷ್ಟಕರ. ಇದನ್ನು ಸವಾಲಾಗಿ ಸ್ವೀಕರಿಸುವ ಕುಸ್ತಿಪಟು, ಮಿತವಾದ ಆಹಾರಗಳನ್ನೇ ಸೇವಿಸಬೇಕು ಹಾಗೂ ಅಗತ್ಯ ವ್ಯಾಯಾಮ ಮಾಡಬೇಕು. ವರದಿಗಳ ಪ್ರಕಾರ, ಫೈನಲ್​ ಹಿಂದಿನ ಬೆಳ್ಳಗ್ಗೆ 300 ಗ್ರಾಂ ಜ್ಯೂಸ್​ ಸೇವಿಸಿದ ವಿನೇಶ್​, ಅದಾದ ಬಳಿಕ ಒಂದಷ್ಟು ಲೀಟರ್ ದ್ರವವನ್ನು ಎನರ್ಜಿಗಾಗಿ ಕುಡಿದಿದ್ದರು. ಇದು ಮತ್ತಷ್ಟು ನಿರೀಕ್ಷಿತ 2000 ಗ್ರಾಂಗಳನ್ನು (2 ಕೆಜಿ) ಹೆಚ್ಚಿಸಿತು.

ಫೈನಲ್‌ ಸವಾಲಿನ ಹಾದಿಯಲ್ಲಿ ತೊಡಗಿದ್ದ ವಿನೇಶ್​, ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಂಜೆ ವೇಳೆಗೆ ಕೆಲವು ಲಘು ತಿನಿಸುಗಳನ್ನು ಸೇವಿಸಿದ್ದಾರೆ. ಇದು ಸುಮಾರು 700 ಗ್ರಾಂಗಳ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿತು. ತೂಕ ಪರೀಕ್ಷಿಸಿಕೊಂಡ ಫೋಗಟ್​ಗೆ ಆಘಾತವಾಗಿದ್ದು, ತಾನು 49.9ರಿಂದ 52.7 ಕೆಜಿ ಹೆಚ್ಚಳವಾಗಿದ್ದೀನಿ ಎಂಬ ಸಂಗತಿ. ತಕ್ಷಣವೇ ತೂಕ ಇಳಿಸಲು ರಾತ್ರಿಯಿಡೀ ನಾನಾ ರೀತಿಯಲ್ಲಿ ಕಸರತ್ತು ಮಾಡಿದ ವಿನೇಶ್​, ಸತತ 6 ಗಂಟೆಗಳ ಕಾಲ ಥ್ರೇಡ್​ಮಿಲ್​ ಮೇಲೆ ಓಡಿದರು. ಒಂದು ಹನಿ ನೀರು ಕುಡಿಯದ ಫೋಗಟ್​ರ ಕೂದಲನ್ನು ಕೂಡ ಕತ್ತರಿಸಲಾಯಿತು. ಆದ್ರೆ, ಅಂತಿಮವಾಗಿ 100 ಗ್ರಾಂ ಕರಗಿಸಲು ವಿಫಲವಾದ ಅವರನ್ನು ಐಒಸಿ ಒಲಿಂಪಿಕ್​ ಫೈನಲ್​ ಸ್ಪರ್ಧೆಯಿಂದ ಅರ್ನಹಗೊಳಿಸಿತು,(ಏಜೆನ್ಸೀಸ್).