ಕ್ರೀಡೆ

ಬೆಳ್ಳಿ ಸಿಂಧು ವಿಶ್ವ ಚಾಂಪಿಯನ್​ಷಿಪ್​ ಗೆದ್ದು ಚಿನ್ನದ ಸಿಂಧು ಆಗಿದ್ದು ಹೇಗೆ...? ಪಿ.ವಿ. ಸಿಂಧು ಅವರಿಂದಲೇ ಪಡೆಯಿರಿ ಮಾಹಿತಿ

ನವದೆಹಲಿ: ಭಾರತದ ಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು ಹಾಲಿ ವಿಶ್ವ ಚಾಂಪಿಯನ್​ ಆಗಿದ್ದಾರೆ. ಇದಕ್ಕೂ ಮುನ್ನ ಅವರು ಹಲವು ಟೂರ್ನಿಗಳ ಫೈನಲ್​ ತಲುಪಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೆ ಕೇವಲ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಿದ್ದರು. ಇದರಿಂದಾಗಿ ಜನರು ಅವರನ್ನು ಬೆಳ್ಳಿ ಸಿಂಧು ಎಂದೇ ಕರೆಯಲಾರಂಭಿಸಿದ್ದರು.

ಇದು ಪಿ.ವಿ. ಸಿಂಧು ಅವರ ಗಮನಕ್ಕೂ ಬಂದಿತ್ತು. ಹೀಗಾಗಿ ಅವರು, ಈ ಹೆಸರನ್ನು ಚಿನ್ನದ ಸಿಂಧು ಆಗಿ ಪರಿವರ್ತಿಸಿಕೊಳ್ಳಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ತಾವು ವಿಶ್ವ ಚಾಂಪಿಯನ್​ಷಿಪ್​ ಅನ್ನು ಇದಕ್ಕೆ ವೇದಿಕೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾಗಿ ಸ್ಮೃತಿ ಮಂದಣ್ಣ ಮತ್ತು ಜೆಮಿಮಾ ರೋಡ್ರಿಗ್ಸ್​ ಜತೆಗಿನ ಸಂವಾದದಲ್ಲಿ ವಿವರಿಸಿದ್ದಾರೆ.

2019ರ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ನಾನು ಪ್ರಶಸ್ತಿ ಸುತ್ತು ತಲುಪಿದ್ದೆ. ನೊವೋಮಿ ಓಕುಹಾರಾ ನನ್ನ ಎದುರಾಳಿಯಾಗಿದ್ದರು. ನಾನು ಅದಾಗಲೆ ಎರಡು ಕಂಚು ಮತ್ತು ಎರಡು ಬೆಳ್ಳಿ ಪದಕ ಗೆದ್ದುಕೊಂಡಿದ್ದೆ. ಆದ್ದರಿಂದ, ಈ ಪಂದ್ಯವನ್ನು ಗೆಲ್ಲಲೇ ಬೇಕೆಂದು ನಿರ್ಧರಿಸಿದ್ದೆ. ಒಂದು ವೇಳೆ ಪಂದ್ಯ ಸೋತರೆ ಏನು ಮಾಡಬೇಕು ಎಂದು ತಿಳಿಯದ ಅಯೋಮಯ ಸ್ಥಿತಿಯಲ್ಲಿ ನಾನಿದ್ದೆ ಎಂದು ಹೇಳಿಕೊಂಡಿದ್ದಾರೆ.

ಏನಾದರಾಗಲಿ, ಈ ಪಂದ್ಯವನ್ನು ಗೆಲ್ಲಲೇ ಬೇಕು. ಶತಪ್ರತಿಶತ ಪ್ರಯತ್ನ ಮಾಡಲೇಬೇಕು ಎಂದು ನಿರ್ಧರಿಸಿದ್ದೆ. ಬೆಳ್ಳಿ ಸಿಂಧು ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕು. ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಅಂದುಕೊಂಡಂತೆ ಶೇ.100 ಶ್ರಮ ಹಾಕಿದೆ. ಇದು ಫಲ ನೀಡಿತು. ಕೊನೆಗೂ ನಜೋಮಿ ಓಕುಹಾರಾ ಅವರನ್ನು ಮಣಿಸಿ, ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದೆ. ಜತೆಗೆ ಬೆಳ್ಳಿ ಸಿಂಧು ಎಂಬ ಹಣೆಪಟ್ಟಿಯನ್ನು ಕಳಚಿಕೊಂಡಿದ್ದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

2012ರ ಒಲಿಂಪಿಕ್ಸ್​ ಕ್ರೀಡಾಕೂಟದ ಬ್ಯಾಡ್ಮಿಂಟನ್​ ಚಾಂಪಿಯನ್​ ಲಿ ಕ್ಯುರೆಯಿ ಅವರನ್ನು ಮಣಿಸಿದ್ದು ತಮ್ಮ ವೃತ್ತಿಜೀವನಕ್ಕೆ ಬಹುದೊಡ್ಡ ತಿರುವು ನೀಡಿತು ಎಂದು ಹೇಳಿಕೊಂಡಿದ್ದಾರೆ.