ನವದೆಹಲಿ: ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿಯನ್ನು ಭಾರತಕ್ಕೆ ತಂದುಕೊಟ್ಟಿತು. ತಂಡದ ಆಟಗಾರರ ಶ್ರಮಕ್ಕೆ ಅಭಿನಂದನೆ ವ್ಯಕ್ತಪಡಿಸಿದ್ದ ಬಿಸಿಸಿಐ, ಕೊಟ್ಟ ಮಾತಿನಂತೆ ಇಡೀ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನವನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಸ್ತಾಂತರಿಸಿತು.
ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನದಲ್ಲಿ ತಂಡದ 15 ಮಂದಿಗೆ ತಲಾ 5 ಕೋಟಿ ರೂ. ಸಿಗಲಿದೆ. ಇವರಲ್ಲಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಸೇರಿದ್ದಾರೆ. ಇದರೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಐದು ಕೋಟಿ ರೂ. ದೊರೆಯಲಿದ್ದು, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರಿಗೆ ತಲಾ 2.5 ಕೋಟಿ ರೂ. ಸಿಗಲಿದೆ. ಟೀಮ್ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದ್ದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಐವರು ಸದಸ್ಯರು ತಲಾ ಒಂದು ಕೋಟಿ ಪಡೆಯಲಿದ್ದಾರೆ.
ಫಿಸಿಯೋ ಥೆರಪಿಸ್ಟ್‌ಗಳಾದ ಕಮಲೇಶ್ ಜೈನ್, ಯೋಗೇಶ್ ಪರ್ಮಾರ್, ತುಳಸಿ ರಾಮ್ ಯುವರಾಜ್, ಥ್ರೋ ಡೌನ್ ಸ್ಪೆಷಲಿಸ್ಟ್‌ಗಳಾದ ರಾಘವೇಂದ್ರ ಡಿವಿಜಿ, ನುವಾನ್ ಉದೆನೆಕೆ, ದಯಾನಂದ್ ಗರಣಿ, ಮಸಾಜ್‌ದಾರರಾದ ರಾಜೀವ್ ಕುಮಾರ್, ಅರುಣ್ ಕಾನಡೆ ಮತ್ತು ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಸೋಹಂ ದೇಸಾಯಿ ಅವರು ಬಹುಮಾನದ ಮೊತ್ತದಿಂದ ತಲಾ 2 ಕೋಟಿ ರೂಪಾಯಿ ಸ್ವೀಕರಿಸಲಿದ್ದಾರೆ. 42 ಸದಸ್ಯರನ್ನು ಒಳಗೊಂಡಿದ್ದ ಭಾರತ ತಂಡಕ್ಕೆ ಈ ಹಣ ಸೇರಲಿದೆ.
ಇನ್ನು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅಂದು ಬಿಸಿಸಿಐ ಪ್ರತ್ಯೇಕವಾಗಿ ಆಯಾ ವಿಶ್ವಕಪ್ನಲ್ಲಿ ತಂಡಕ್ಕೆ ಘೋಷಿಸಿದ ಬಹುಮಾನ ಹಣವೆಷ್ಟು ಎಂಬುದರ ಸಂಪೂರ್ಣ ವಿವರ ಈ ಕೆಳಕಂಡಂತಿದೆ ಗಮನಿಸಿ.