ಕ್ರೀಡೆ

ಮನೆಯಲ್ಲಿ ಯಾರಿಗೂ ಹೇಳದೆ ನಿಶ್ಚಿತಾರ್ಥ ಮಾಡಿಕೊಂಡ್ರು ಹಾರ್ದಿಕ್​ ಪಾಂಡ್ಯ; ಇದು ನಮಗೂ ಅಚ್ಚರಿ ಎಂದ್ರು ತಂದೆ ಹಿಮಾಂಶು ಪಾಂಡ್ಯ

ಮುಂಬೈ: ಟೀಂ ಇಂಡಿಯಾ ಕ್ರಿಕೆಟರ್​ ಹಾರ್ದಿಕ್ ಪಾಂಡ್ಯಾ ಹೊಸವರ್ಷದಂದೇ ಗೆಳತಿ, ನಟಿ ನತಾಶಾ ಸ್ಟ್ಯಾಂಕೋವಿಕ್​ ​ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಯೋಗರಾಜ ಭಟ್​ ನಿರ್ದೇಶನದ ದನ ಕಾಯೋನು ಸಿನಿಮಾದಲ್ಲಿ ಅಭಿನಯ ಮಾಡಿದ್ದ ಬಾಲಿವುಡ್​ ನಟಿ ನತಾಶಾ ಹಾಗೂ ಹಾರ್ದಿಕ್​ ಪಾಂಡ್ಯಾ ನಿಶ್ಚಿತಾರ್ಥ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.

ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಹಾರ್ದಿಕ್​ ಪಾಂಡ್ಯಾ ಎಂಗೇಜ್​ಮೆಂಟ್​ ಬರೀ ಅಭಿಮಾನಿಗಳಿಗಷ್ಟೇ ಅಲ್ಲ ಅವರ ಕುಟುಂಬದವರಲ್ಲೂ ಅಚ್ಚರಿ ಮೂಡಿಸಿದೆ. ಹಾರ್ದಿಕ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂದು ಅವರ ತಂದೆಗೇ ಗೊತ್ತಿರಲಿಲ್ಲವಂತೆ !

ಈ ಬಗ್ಗೆ ಹಾರ್ದಿಕ್​ ಪಾಂಡ್ಯಾ ತಂದೆ ಹಿಮಾಂಶು ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನತಾಶಾ ಒಳ್ಳೆಯ ಹುಡುಗಿ. ನಾವು ಆಕೆಯನ್ನು ಮುಂಬೈನಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇವೆ. ಹಾರ್ದಿಕ್​ ಹಾಗೂ ನತಾಶಾ ದುಬೈಗೆ ಪ್ರವಾಸಕ್ಕೆ ಹೋಗಿದ್ದಾರೆಂದು ಗೊತ್ತಿತ್ತು. ಆದರೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ನಮಗೂ ಆಶ್ಚರ್ಯವಾಗಿದೆ ಎಂದಿದ್ದಾರೆ.

ಹಾರ್ದಿಕ್​ ಪಾಂಡ್ಯ ಎಂಗೇಜ್​ಮೆಂಟ್ ಆಗಿದ್ದರೂ ಮದುವೆಯ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಬಹುಶಃ ಮುಂದಿನ ವರ್ಷ ಇರಬಹುದು ಎಂದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)