ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದು, ಈ ನಿಟ್ಟಿನಲ್ಲಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. ಜನವರಿ 30ರಂದು ರೈಲ್ವೇಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ದೆಹಲಿ ಪರ ಆಡಲಿರುವ ವಿರಾಟ್ 12 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದು, ಇಂದು ಮೈದಾನದಲ್ಲಿ ಅಭ್ಯಾಸ ನಡೆಸಿದರು.
ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ (Virat Kohli) ತಮ್ಮ ಸ್ನೇಹಿತ ಶವೇಜ್ನನ್ನು ಭೇಟಿ ಮಾಡಿದ್ದು, ಕೆಲಕಾಲ ಮಾತನಾಡಿ ಜತೆಯಾಗಿ ಅಭ್ಯಾಸ ನಡೆಸಿದ್ದಾರೆ. ಅಲ್ಲದೇ ಅಭ್ಯಾಸದ ವೇಳೆ ಕೆಲ ಸ್ವಾರಸ್ಯಕರ ಘಟನೆಗಳು ನಡೆದಿದ್ದು, ಬಾಲಕ ಕಬೀರ್ ಎಂಬಾತ ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗಬೇಕೆಂದರೆ ಏನು ಮಾಡಬೇಕೆಂದು ಕೇಳಿದ್ದಾನೆ. ಇದಕ್ಕೆ ಕೊಹ್ಲಿ ನೀಡಿದ ಉತ್ತರ ಎಲ್ಲರ ಮನಗೆಲ್ಲುತ್ತಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಅಭ್ಯಾಸ ನಡೆಸುತ್ತಿದ್ದ ವೇಳೆ ಬಾಲಕ ಕಬೀರ್ ವಿರಾಟ್ ಕೊಹ್ಲಿ (Virat Kohli) ಬಳಿ ಬಂದು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕಂದರೆ ಏನು ಮಾಡಬೇಕೆಂದು ಕೇಳಿದ್ದಾನೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಕೊಹ್ಲಿ ನೀವು ಕಠಿಣ ಅಭ್ಯಾಸ ಮಾಡಿದರೆ ತಂಡದಲ್ಲಿ ಸ್ಥಾನ ಪಡೆಯುತ್ತೀರ. ನಿಮ್ಮ ತಂದೆಗೆ ನೀವೇ ನಾನು ಅಭ್ಯಾಸ ನಡೆಸಲು ಹೋಗುತ್ತಿದ್ದೇನೆ ಎಂದು ಹೇಳಬೇಕು. ಬಾಲಕನ ಪ್ರಶ್ನೆಗೆ ಕೊಹ್ಲಿ ಗೆಸ್ಚರ್ ವೈರಲ್ ಆಗಿದ್ದು, ಸದ್ಯ ಈ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ.
ಈಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಒಂದು ಶತಕ ಸೇರಿದಂತೆ ಐದು ಪಂದ್ಯಗಳಲ್ಲಿ ಒಟ್ಟು 190 ರನ್ಗಳಿಸಿದ್ದ ವಿರಾಟ್ ಕೊಹ್ಲಿ (Virat Kohli) ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ಹುಸಿಯಾಗಿಸಿದ್ದರು. ಬಿಸಿಸಿಐ ಜಾರಿ ಮಾಡಿರುವ ನೂತ ನಿಯಮದ ಪ್ರಕಾರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರು ತಮ್ಮ ಫಾರ್ಮ್ಅನ್ನು ಸಾಬೀತು ಮಾಡಲು ದೇಶೀಯ ಟೂರ್ನಿಗಳಲ್ಲಿ ಆಡುವಂತೆ ಸೂಚನೆ ನೀಡಿತ್ತು. ಅದರಂತೆ ವಿರಾಟ್ ಕೊಹ್ಲಿ ದೆಹಲಿ ಪರ ರಣಜಿ ಟೂರ್ನಿಯಲ್ಲಿ ಆಡುತ್ತಿದ್ದಾರೆ.