ಹಾಕಿ ವಿಶ್ವಕಪ್ ಕನಸಿನಲ್ಲಿ ಕರ್ನಾಟಕದ ಆಕಸ್ಮಿಕ ಗೋಲು ಕೀಪರ್ ಮೋಹಿತ್
- 12 ವರ್ಷಗಳ ನಂತರ ಹಾಕಿ ವಿಶ್ವಸಮರಕ್ಕೆ ಭಾರತ ತಂಡದಲ್ಲಿ ಕನ್ನಡಿಗ
- 5 ದಶಕಗಳ ಪ್ರಶಸ್ತಿ ಬರ ನೀಗಿಸುವ ತವಕ
ಗುರುರಾಜ್ ಬಿ.ಎಸ್. ಬೆಂಗಳೂರು
ಬಾಲ್ಯದಲ್ಲಿ ಕ್ರಿಕೆಟ್ "ಬ್ಯಾಟ್', ಶಾಲಾ ದಿನಗಳಲ್ಲಿ ವಾಲಿಬಾಲ್' ಹಿಡಿದು ಮೈದಾನದಲ್ಲಿ ಆಡುತ್ತಿದ್ದ ಬಾಲಕ ಹಾಕಿ ತಂಡದ ಗೋಲು ಕೀಪರ್ ಆಗಿ ರೂಪುಗೊಂಡಿದ್ದು ಆಕಸ್ಮಿಕ. ಹಾಕಿ ವಿಶ್ವಕಪ್ನಲ್ಲಿ (FIH Hockey World Cup) 51 ವರ್ಷಗಳ ಪ್ರಶಸ್ತಿ ಬರ ನೀಗಿಸಲು ಆಯ್ಕೆಯಾಗಿರುವ ಭಾರತ ಪುರುಷರ ತಂಡದ ಭಾಗವಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನೆನಹಳ್ಳಿಯ ಎಚ್.ಎಸ್ ಮೋಹಿತ್ ಈ "ಆಕಸ್ಮಿಕ' ಗೋಲು ಕೀಪರ್. ಜಪಾನ್ನಲ್ಲಿ ನಿಗದಿಯಾಗಿರುವ ಏಷ್ಯನ್ ಗೇಮ್ಸ್ಗೂ ಅವರು ಆಯ್ಕೆ ಆಗಿದ್ದಾರೆ. ಆಗಸ್ಟ್ 15ಕ್ಕೆ ಬೆಲ್ಜಿಯಂ-ನೆದರ್ಲ್ಯಾಂಡ್ಸ್ ಜಂಟಿ ಆತಿಥ್ಯದಲ್ಲಿ ಆರಂಭವಾಗಲಿರುವ ಎಫ್ಐಎಚ್ ಹಾಕಿ ವಿಶ್ವಕಪ್ನಲ್ಲಿ 12 ವರ್ಷಗಳ ನಂತರ ಭಾರತ ತಂಡದ ಪರ ಆಡಲಿರುವ ಕನ್ನಡಿಗ ಎನಿಸಿಕೊಳ್ಳಲಿರುವ 24 ವರ್ಷದ ಮೋಹಿತ್ ಈ ಕುರಿತು "ವಿಜಯವಾಣಿ' ಜತೆ ಮಾತನಾಡಿದ್ದಾರೆ.
ಸತತವಾಗಿ ವಿಶ್ವಕಪ್, ಏಷ್ಯನ್ ಗೇಮ್ಸ್ನಂಥ ಎರಡು ಮಹತ್ವದ ಟೂರ್ನಿಗಳಲ್ಲಿ ಆಡುವ ಒತ್ತಡವಿಲ್ಲ. ಒಂದು ಸಮಯದಲ್ಲಿ ಒಂದೇ ಟೂರ್ನಿಯ ಬಗ್ಗೆ ಗಮನಹರಿಸುತ್ತೇವೆ. ಅದಾದ ಮೇಲೆ ಇನ್ನೊಂದು ಟೂರ್ನಿಗೆ ಸಜ್ಜುಗೊಳ್ಳುವುದಾಗಿ ಮೋಹಿತ್ ತಿಳಿಸಿದರು.
ಸಣ್ಣವನಿದ್ದಾಗ ಕ್ರಿಕೆಟ್ಗೆ ಸೇರಿಸಲು ಹಠ ಮಾಡಿದೆ. ನಂತರ ಬೇಸಿಗೆ ಶಿಬಿರಕ್ಕೆ ಸೇರಿಸಿದರು. ನಂತರ ನನ್ನ ಕ್ರೀಡಾಸಕ್ತಿ ಗಮನಿಸಿದ ತಾತ ಕ್ರೀಡಾ ವಸತಿ ನಿಲಯದ ಆಯ್ಕೆ ಪ್ರಕ್ರಿಯೆಗೆ ಕರೆದುಕೊಂಡು ಹೋದರು. ನನ್ನ ಎತ್ತರ ಚೆನ್ನಾಗಿದ್ದರಿಂದ ವಾಲಿಬಾಲ್ಗೆ ಅಲ್ಲಿ ಆಯ್ಕೆ ಮಾಡಿದರು. ನಂತರ ಹಾಸ್ಟೆಲ್ ಹಾಕಿ ತಂಡ ಟೂರ್ನಿಯೊಂದಕ್ಕೆ ಸಿದ್ಧವಾಗುತ್ತಿರುವಾಗ ಗೋಲು ಕೀಪರ್ ಕೊರತೆ ಕಾಡಿತು. ಆಗ, ತಾತ್ಕಾಲಿಕವಾಗಿ ಗೋಲು ಕೀಪರ್ ಸ್ಥಾನ ತುಂಬಿದೆ. ನಂತರ 9ನೇ ತರಗತಿಯಲ್ಲಿದ್ದಾಗ ಫಾರ್ವರ್ಡ್ ಆಟಗಾರನಾಗಿ ಗೋಲು ಗಳಿಸುವ ಆಸೆ ಹುಟ್ಟಿತು. ಆದರೆ ಅಲ್ಲಿನ ಕೋಚ್ ನಿನ್ನನ್ನು ಗೋಲು ಕೀಪರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ನಂತರ 10ನೇ ತಗರತಿಯಲ್ಲಿ ಗೋಲು ಕೀಪರ್ ಅಗಿ ಉತ್ತಮ ಯಶಸ್ಸು ದೊರೆಯಿತು. ರಾಜ್ಯಮಟ್ಟದಲ್ಲಿ ರನ್ನರ್ ಅಪ್ ಪ್ರಶಸ್ತಿ ಬಂತು. ಇನ್ನೊಂದು ಟೂರ್ನಿಯಲ್ಲಿ ಬೆಸ್ಟ್ ಗೋಲು ಕೀಪರ್ ಪ್ರಶಸ್ತಿ ಸಿಕ್ಕಿತು. ಆಗ ಫಾರ್ವರ್ಡ್, ಡಿಫೆಂಡರ್ ಪಾತ್ರಗಳಿಗಿಂತ ಗೋಲು ಕೀಪರ್ನ ಪ್ರಾಮುಖ್ಯತೆ ಅರಿವಾಯಿತು. ಅಲ್ಲಿಂದ ಅದನ್ನು ಆನಂದಿಸಲು ಆರಂಭಿಸಿದೆ ಎಂದು ಆರಂಭಿಕ ದಿನಗಳನ್ನು ಮೋಹಿತ್ ಮೆಲುಕು ಹಾಕಿದರು.
ಜೂನಿಯರ್ ಹಂತದಿಂದ ಸೀನಿಯರ್ ತಂಡಕ್ಕೆ ಕಾಲಿಟ್ಟ ಆರಂಭದಲ್ಲಿ ಕಷ್ಟ ಎನಿಸಿತು. ರಾಷ್ಟ್ರೀಯ ತಂಡದಲ್ಲಿನ ಆಟಗಾರರ ಕೌಶಲ ಯೋಜನೆ, ಮಾನಸಿಕ ಸ್ಥೈರ್ಯ ಜತೆಗೆ ಹೊಂದಾಣಿಕೆಯಾಗಲು ಸಮಯ ಹಿಡಿಯಿತು. ಇತರ ಆಟಗಾರರ ಆಟ ಅವಲೋಕನದಿಂದ ನನ್ನ ಆಟವನ್ನು ಸುಧಾರಿಸಿಕೊಳ್ಳುತ್ತಿದ್ದೇನೆ ಎಂದ ಮೋಹಿತ್, ಕರೋನಾ ಸಮಯದಲ್ಲಿ ಹಾಕಿಯನ್ನು ತ್ಯಜಿಸಲು ನಿರ್ಧರಿಸಿದ್ದಾಗಿಯೂ ತಿಳಿಸಿದರು. ಲಾಕ್ಡೌನ್ ಸಮಯದಲ್ಲಿ ಜೂನಿಯರ್ ರಾಷ್ಟ್ರೀಯ ಟೂರ್ನಿ ರದ್ದುಗೊಂಡಿತು. ಆಗ, ಹಾಕಿಯನ್ನು ಬಿಟ್ಟು ಸಿಎ ಮಾಡುವುದಾಗಿ ಅಪ್ಪನಿಗೆ ತಿಳಿಸಿದಾಗ, ಅವರು ಕ್ರೀಡೆಯಲ್ಲಿ ಮುಂದುವರಿಯಲು ಸಲಹೆ ನೀಡಿದರು. ನಂತರ ರಾಜ್ಯ ತಂಡದಲ್ಲಿನ ಪ್ರದರ್ಶನ ಜೂನಿಯರ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ನೆರವಾಯಿತು ಎಂಬ ತೃಪ್ತಿ ವ್ಯಕ್ತಪಡಿಸಿದರು. ಮೋಹಿತ್ ಪ್ರಸ್ತುತ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಆಟಗಾರರ ಜತೆಗೆ ಆರಂಭಿಕ ದಿನಗಳಲ್ಲಿ ಕಮ್ಯುನಿಕೇಷನ್ ಸ್ವಲ್ಪ ವೀಕ್ ಇತ್ತು. ಪ್ರೊ ಲೀಗ್ನಲ್ಲಿ ತುಂಬ ಚೆನ್ನಾಗಿ ಇದನ್ನು ಸುಧಾರಿಸಿಕೊಂಡಿದ್ದು, ಡಿಫೆಂಡರ್ಗಳ ಜತೆಗೆ ಉತ್ತಮ ಹೊಂದಾಣಿಕೆ ಇದೆ. ಹಾಕಿ ಇಂಡಿಯಾ ಲೀಗ್ನಿಂದಲೂ ಬಹಳಷ್ಟು ಕಲಿಯಲು ಸಿಕ್ಕಿದೆ. ಭಾರತೀಯರ ಜತೆಗೆ ವಿದೇಶಿ ತಾರೆಯರು, ಕೋಚ್ಗಳು ಇರುವುದರಿಂದ ಆಟ ಆಡುವಾಗ ಹೊಸ ಆತ್ಮವಿಶ್ವಾಸ ತುಂಬುತ್ತದೆ. ಹಿರಿಯ ಆಟಗಾರರ ಜತೆಗಿನ ಸಂವಹನದಿಂದ ತುಂಬ ಸಹಾಯ ಆಗಿದೆ ಎಂದು ಹಾಕಿ ಇಂಡಿಯಾ ಲೀಗ್ ಅನುಭವ ಹಂಚಿಕೊಂಡರು.
*ಈ ಬಾರಿಯ ತಂಡ ಅತ್ಯುತ್ತಮವಾಗಿದ್ದು, ಪ್ರೊ ಲೀಗ್ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ, ನೆದರ್ಲ್ಯಾಂಡ್ಸ್ ಎದುರಿನ ಜಯ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರಿಂದ ಪ್ರಶಸ್ತಿ ಜಯಿಸಲು ನಾವು ಸರಿಯಾದ ಮಾರ್ಗದಲ್ಲಿದ್ದೇವೆ ಎಂದೆನೆನಿಸಿದೆ. ವಿಶ್ವಕಪ್ ಜಯಿಸುವುದು ವೈಯಕ್ತಿಕ ಗುರಿಯೂ ಆಗಿದೆ.
| ಮೋಹಿತ್, ಭಾರತ ತಂಡದ ಗೋಲು ಕೀಪರ್
2014ರ ನಂತರ ವಿಶ್ವಕಪ್ ತಂಡದಲ್ಲಿ ಕನ್ನಡಿಗ
2023ರ ಜೂನಿಯರ್ ವಿಶ್ವಕಪ್ನಲ್ಲಿ 4ನೇ ಸ್ಥಾನಿ, 2022, 2023ರ ಸುಲ್ತಾನ್ ಜೋಹರ್ ಕಪ್ನಲ್ಲಿ ಕ್ರಮವಾಗಿ ಚಿನ್ನ, ಕಂಚು ಹಾಗೂ 2023ರ ಜೂ.ಏಷ್ಯಾಕಪ್ ಚಾಂಪಿಯನ್ ತಂಡದ ಭಾಗವಾಗಿದ್ದ ಎಚ್.ಎಸ್. ಮೋಹಿತ್, ಎಫ್ಐಎಚ್ ಪುರುಷರ ಹಾಕಿ ವಿಶ್ವಕಪ್ನಲ್ಲಿ 12 ವರ್ಷಗಳ ನಂತರ ಆಡುತ್ತಿರುವ ಕರ್ನಾಟಕದ ಹಾಕಿ ತಾರೆ ಆಗಿದ್ದಾರೆ. ಭಾರತ ಹಾಕಿ ತಂಡಕ್ಕೆ ಹಲವು ದಿಗ್ಗಜ ಆಟಗಾರರನ್ನು ನೀಡಿರುವ ಕರ್ನಾಟಕದಿಂದ 2014ರ ವಿಶ್ವಕಪ್ನಲ್ಲಿ ವಿ.ಆರ್. ರುನಾಥ್, ಎಸ್.ವಿ.ಸುನೀಲ್, ಎಸ್ಕೆ ಉತ್ತಪ್ಪ ಕೊನೆಯದಾಗಿ ಆಡಿದ್ದರು. ನಂತರ 2018, 2023ರ ವಿಶ್ವಕಪ್ನಲ್ಲಿ ಕರ್ನಾಟಕದ ಯಾವ ಆಟಗಾರರೂ ಭಾರತ ತಂಡ ಪ್ರತಿನಿಧಿಸಿರಲಿಲ್ಲ. ರಾಜ್ಯದ ಹಲವು ಹಿರಿಯ ಆಟಗಾರರ ಜತೆಗೆ ನಿರಂತರ ಸಂಪರ್ಕದಲ್ಲಿರುವ ಮೋಹಿತ್, ಯಾವುದೇ ವಿಷಯಗಳಲ್ಲಿ ಸಂದೇಹವಿದ್ದಾಗ ಅವರ ಬಳಿ ಸಲಹೆ ಪಡೆಯುವುದಾಗಿ ತಿಳಿಸಿದರು.
ಪ್ರಮುಖ ಟೂರ್ನಿಯ ಒತ್ತಡವಿಲ್ಲ
ಪೆನಾಲ್ಟಿ ಹಾಗೂ ಶೂಟೌಟ್ ಅಂಥ ಸನ್ನಿವೇಶದಲ್ಲಿ ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡಿದ ಮೋಹಿತ್, ಪಂದ್ಯದ ಹಿಂದಿನ ದಿನ ಮಲಗುವ ಮುನ್ನ ಕೆಲ ಸನ್ನಿವೇಶಗಳನ್ನು ಊಹಿಸಿಕೊಳ್ಳುತ್ತೇನೆ. ಏಕೆಂದರೆ, ಯಾವುದೇ ಅನಪೇತ ಸನ್ನಿವೇಶ ಎದುರಾದಾಗ ನನಗೆ ಶಾಕ್ ಆಗಬಾರದು. ಹೆಚ್ಚು ಚಿಂತಿಸದಂತೆ ನನಗೆ ನಾನೇ ಹೇಳಿಕೊಂಡು ಮಾನಸಿಕವಾಗಿ ಸಜ್ಜಾಗುತ್ತೇನೆ. ಇದರಿಂದ ಪೆನಾಲ್ಟಿ ಶೂಟೌಟ್ ನಂಥ ಸನ್ನಿವೇಶ ಎದುರಿಸಲು ಸುಲಭವಾಗುತ್ತದೆ ಎಂದರು.