ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ: ಫೈನಲ್ಗೇರಿದ ಭಾರತ
ಇಪೋಹ್ (ಮಲೇಷ್ಯಾ): ಜುಗ್ರಾಜ್ ಸಿಂಗ್ (12, 26, 39, 50ನೇ ನಿಮಿಷ) ಸಿಡಿಸಿದ 4 ಗೋಲುಗಳ ಬಲದಿಂದ ಭಾರತ ತಂಡ 31ನೇ ಸುಲ್ತಾನ್ ಅಜ್ಲಾನ್ ಷಾ ಕಪ್ (Sultan Azlan Shah Cup) ಪುರುಷರ ಹಾಕಿ ಟೂರ್ನಿಯಲ್ಲಿ ತನ್ನ 5ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಕೆನಡಾ ವಿರುದ್ಧ ಗೋಲುಗಳ ಸುರಿಮಳೆ ಹರಿಸುವ ಮೂಲಕ 14-3 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ತಂಡ ಟೂರ್ನಿಯ ಫೈನಲ್ಗೆ ಲಗ್ಗೆಯಿಟ್ಟಿದೆ. ಭಾನುವಾರ ನಡೆಯಲಿರುವ ಪ್ರಶಸ್ತಿ ಕಾದಾಟದಲ್ಲಿ ಭಾರತ&ಬೆಲ್ಜಿಯಂ ತಂಡಗಳು ಮುಖಾಮುಖಿ ಆಗಲಿವೆ.
ಶನಿವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಮೊದಲಾರ್ಧದಲ್ಲಿ 7-1ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಭಾರತ ಮತ್ತೆ 7 ಗೋಲುಗಳನ್ನು ಸಿಡಿಸಿತು. ರಾಜಿಂದರ್ ಸಿಂಗ್ (10, 24), ಅಮಿತ್ ರೋಹಿದಾಸ್ (15, 46) ಮತ್ತು ಅಭಿಷೇಕ್ (58, 59) ತಲಾ ಎರಡು ಗೋಲು ಬಾರಿಸಿದರೆ, ನೀಲಕಂಠ ಶರ್ಮ (4), ದಿಲ್ಪ್ರೀತ್ ಸಿಂಗ್ (25), ಕಾರ್ತಿ ಸೆಲ್ವಂ (43) ಮತ್ತು ನಾಯಕ ಸಂಜಯ್ (56) ತಲಾ ಒಂದು ಗೋಲು ಬಾರಿಸಿದರು.
ಲೀಗ್ ಹಂತದಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದ ಭಾರತ (12 ಅಂಕ), ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ದ್ವೀತಿಯ ಸ್ಥಾನ ಗಳಿಸಿತು. ಬೆಲ್ಜಿಯಂ (5 ಪಂದ್ಯ, 4 ಜಯ, 1 ಡ್ರಾ, 13 ಅಂಕ) ಅಗ್ರಸ್ಥಾನದೊಂದಿಗೆ ಅಜೇಯವಾಗಿ ಫೈನಲ್ಗೇರಿತು.
ಟೂರ್ನಿಯಲ್ಲಿ 9ನೇ ಬಾರಿ ಫೈನಲ್ಗೇರಿರುವ ಭಾರತ ತಂಡ 6ನೇ ಬಾರಿ ಪ್ರಶಸ್ತಿ ಜಯಿಸುವ ಸನಿಹದಲ್ಲಿದೆ. ಲೀಗ್ ಹಂತದಲ್ಲಿ ಬೆಲ್ಜಿಯಂ ಎದುರು ಪರಾಭವಗೊಂಡಿದ್ದ ಭಾರತ ತಂಡ ಫೈನಲ್ನಲ್ಲಿ ಸೇಡು ತೀರಿಸಿಕೊಳ್ಳಬೇಕಿದೆ.