ಒಲಿಂಪಿಕ್ಸ್​ ತನಕ ಸ್ವೀಟು, ಚಾಕೊಲೇಟ್​ ತಿನ್ನಲ್ಲ! ಭಾರತೀಯ ಹಾಕಿ ಆಟಗಾರ್ತಿಯರ ಸಂಕಲ್ಪ 
ಹಾಕಿ

ಒಲಿಂಪಿಕ್ಸ್​ ತನಕ ಸ್ವೀಟು, ಚಾಕೊಲೇಟ್​ ತಿನ್ನಲ್ಲ! ಭಾರತೀಯ ಹಾಕಿ ಆಟಗಾರ್ತಿಯರ ಸಂಕಲ್ಪ

ನವದೆಹಲಿ: ಮುಂಬರುವ 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ವರೆಗೆ (Los Angeles Olympics) ಸಿಹಿತಿನಿಸು, ಚಾಕೊಲೇಟ್ಸ್​ ಮತ್ತು ಫಾಸ್ಟ್​ಫುಡ್​​ಗಳನ್ನು ತಿನ್ನುವುದಿಲ್ಲ ಎಂದು ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿಯರು ದೃಢಸಂಕಲ್ಪ ಮಾಡಿದ್ದಾರೆ. ಫಿಟ್ನೆಸ್​ ಕಾಯ್ದುಕೊಳ್ಳುವ ಸಲುವಾಗಿ ಅವರು ಈ ಡಯೆಟ್​ ಯೋಜನೆ ಹಾಕಿಕೊಂಡಿದ್ದು, ಸದ್ಯಕ್ಕೆ ಹಾಲಿ ವರ್ಷದ ವಿಶ್ವಕಪ್​ ಮತ್ತು ಏಷ್ಯನ್​ ಗೇಮ್ಸ್​ನಲ್ಲಿ ಪದಕ ಗೆಲ್ಲುವತ್ತ ಗಮನ ಹರಿಸಿದ್ದಾರೆ. ಭಾರತ ತಂಡದ ಅನುಭವಿ ಗೋಲು ಕೀಪರ್​ ಸವಿತಾ ಪೂನಿಯಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ಮಹಿಳಾ ತಂಡ 4ನೇ ಸ್ಥಾನದೊಂದಿಗೆ ಪದಕ ವಂಚಿತವಾಗಿತ್ತು. ಆದರೆ 2024ರ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಲೇ ವಿಫಲವಾಗಿತ್ತು. ಇದೀಗ ತಂಡದ ಸ್ಟ್ರೆಂತ್​ ಮತ್ತು ಕಂಡೀಷನಿಂಗ್​ ಕೋಚ್​ ವೇಯ್ನ್​ ಲಂಬಾರ್ಡ್​ ಮಾರ್ಗದರ್ಶನದಲ್ಲಿ ಆಟಗಾರ್ತಿಯರು ಕಟ್ಟುನಿಟ್ಟಾದ ಫಿಟ್ನೆಸ್​ ಯೋಜನೆಯನ್ನು ಪಾಲಿಸಲು ಆರಂಭಿಸಿದ್ದಾರೆ.

"ನೀವು ಏನನ್ನಾದರೂ ಸಾಧಿಸಬೇಕೆಂದಿದ್ದರೆ, ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂದು ವೇಯ್ನ್​ ಹೇಳಿದ್ದು, ಉನ್ನತ ಫಿಟ್ನೆಸ್​ ಮಾನದಂಡವನ್ನು ನಿಗದಿಪಡಿಸಿದ್ದಾರೆ. ಇದರನ್ವಯ ಆಟಗಾರ್ತಿಯರು ಮೊದಲಿಗೆ ಸಕ್ಕರೆ ಮತ್ತು ಜಂಕ್​ಫುಡ್​ನಿಂದ ದೂರವಿರಲು ನಿರ್ಧರಿಸಿದ್ದಾರೆ. ಕಳೆದ ನೇಷನ್ಸ್​ ಕಪ್​ ಗೆಲುವಿನ ಬಳಿಕ ತಂಡಕ್ಕಾಗಿ ಕೇಕ್​ ಆರ್ಡರ್​ ಮಾಡಲಾಗಿತ್ತು. ಆದರೆ ಯಾವ ಆಟಗಾರ್ತಿಯರೂ ಆ ಕೇಕ್​ ತಿಂದಿರಲಿಲ್ಲ' ಎಂದು ಸವಿತಾ ತಿಳಿಸಿದ್ದಾರೆ.

ನಮ್ಮ ಫಿಟ್ನೆಸ್​ ಈಗ ಸುಧಾರಿಸಿದ್ದು, ಆಧುನಿಕ ಹಾಕಿಗೆ ಇದು ಅತ್ಯಗತ್ಯವಾಗಿದೆ. ಲಾಸ್​ ಏಂಜಲೀಸ್​ನಲ್ಲಿ ಪದಕ ಗೆದ್ದ ಬಳಿಕವೇ ಸಿಹಿ ತಿನ್ನಲಿದ್ದೇವೆ ಎಂದು ಆಟಗಾರ್ತಿಯರು ಸಂಕಲ್ಪ ಮಾಡಿದ್ದಾರೆ. ಎಂದು ಭಾರತ ಪರ 300ಕ್ಕೂ ಅಧಿಕ ಪಂದ್ಯ ಆಡಿರುವ ಸವಿತಾ ಹೇಳಿದ್ದಾರೆ.