ಜೂನಿಯರ್ ಏಷ್ಯಾಕಪ್ ಹಾಕಿ: ಮಹಿಳೆಯರಿಗೆ ಜಯ, ಪುರುಷರು ಡ್ರಾಕ್ಕೆ ತೃಪ್ತಿ
ಮೋಖಿ (ಚೀನಾ): ಎಎಚ್ಎಫ್ ಜೂನಿಯರ್ ಏಷ್ಯಾಕಪ್ ಹಾಕಿ (AHF Junior Asia Cup) ಟೂರ್ನಿಯಲ್ಲಿ ಭಾರತದ ಮಹಿಳೆಯರ ತಂಡ ಸತತ ಎರಡನೇ ಗೆಲುವು ದಾಖಲಿಸಿದ್ದರೆ, ಪುರುಷರ ತಂಡ ಡ್ರಾಕ್ಕೆ ತೃಪ್ತಿಪಟ್ಟಿದೆ. ಭಾರತದ ಮಹಿಳೆಯರ ತಂಡ ಎಲೈಟ್ ಗುಂಪಿನಲ್ಲಿ ಮಲೇಷ್ಯಾ ವಿರುದ್ಧ 11-1 ಗೋಲುಗಳಿಂದ ಗೆಲುವು ದಾಖಲಿಸಿತು. ಭಾರತ ಪರ ಒಟ್ಟು 7 ಆಟಗಾರ್ತಿಯರು ಗೋಲು ದಾಖಲಿಸಿದರು. ಈ ಪೈಕಿ ಪೂಜಾ ಸಹೂ (1, 42), ಪೂರ್ಣಿಮಾ ಯಾದವ್(4,17), ಗೀತಾ ಯಾದವ್(28, 53), ಸನಿಕಾ ಚಂದ್ರಕಾಂತ್ ಮಾನೆ (43, 58) ತಲಾ 2 ಗೋಲು ಗಳಿಸಿದರು.
ಕಳೆದ 2 ಆವೃತ್ತಿಯ ಚಾಂಪಿಯನ್ ಭಾರತ ಇದುವರೆಗೆ ಆಡಿದ 2 ಪಂದ್ಯಗಳಲ್ಲಿ 6 ಅಂಕ ಗಳಿಸಿದ್ದು, ಎಲೈಟ್ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ತಂಡ ಮಂಗಳವಾರ ತನ್ನ 3ನೇ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ.
ಭಾರತದ ಪುರುಷರ ತಂಡ ಎ ಗುಂಪಿನ ಪಂದ್ಯದಲ್ಲಿ ಜಪಾನ್ ಎದುರು 3-3 ಗೋಲುಗಳಿಂದ ಡ್ರಾಕ್ಕೆ ಸಮಾಧಾನ ಕಂಡಿತು. ಭಾರತ ಪರ ನಾಯಕ ಅನ್ಮೋಲ್ ಎಕ್ಕಾ (4, 60) ಅವಳಿ ಗೋಲು ಸಿಡಿಸಿದರೆ, ಆಶು ಮೌರ್ಯ (10) ಒಂದು ಗೋಲು ಬಾರಿಸಿದರು. ಪಂದ್ಯದ 59ನೇ ನಿಮಿಷದಲ್ಲಿ ಜಪಾನ್ 3-2ರಿಂದ ಮುನ್ನಡೆ ಸಾಧಿಸಿತು. ಆಗ ಗೋಲು ಕೀಪರ್ ಹೊರಗಿಟ್ಟು ಆಕ್ರಮಣಕ್ಕಿಳಿದ ಭಾರತ ತಂಡ ಪಂದ್ಯ ಮುಕ್ತಾಯಕ್ಕೆ ಕೇವಲ 59 ಸೆಕೆಂಡ್ ಬಾಕಿ ಇದ್ದಾಗ 3-3 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ ದ. ಕೊರಿಯಾ ತಂಡದ ಸವಾಲು ಎದುರಿಸಲಿದೆ.