Hockey: ಭಾರತ ಮಹಿಳಾ ಹಾಕಿ ಕೋಚ್ ಹರೇಂದ್ರ ಸಿಂಗ್ ದಿಢೀರ್ ಪದತ್ಯಾಗ!
ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಹರೇಂದ್ರ ಸಿಂಗ್ (Harendra Singh) ವೈಯಕ್ತಿಕ ಕಾರಣ ನೀಡಿ ಸೋಮವಾರ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ತಕ್ಷಣದಿಂದಲೇ ಅನ್ವಯಿಸುವಂತೆ ತಾನು ಹುದ್ದೆಯಿಂದ ಕೆಳಗಿಳಿಯಲಿದ್ದೇನೆ ಎಂದು ಹರೇಂದ್ರ, ಹಾಕಿ ಇಂಡಿಯಾಗೆ ( Hockey India ) ಕಳುಹಿಸಿರುವ ಇ-ಮೇಲ್ನಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಭಾರತ ಮಹಿಳಾ ತಂಡ 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಪಡೆದ ವೇಳೆ ಮುಖ್ಯ ಕೋಚ್ ಆಗಿದ್ದ ಡಚ್ ತಂತ್ರಗಾರ ಸ್ಜೋರ್ಡ್ ಮರಿಜ್ನೆ ಮತ್ತೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮರಿಜ್ನೆ 2021ರ ಆಗಸ್ಟ್ನಲ್ಲಿ ಪದತ್ಯಾಗ ಮಾಡಿದ್ದರು. 2024ರ ಏಪ್ರಿಲ್ನಲ್ಲಿ ಹರೇಂದ್ರ ಹುದ್ದೆಗೇರಿದ್ದರು. ಅದಕ್ಕೆ ಮುನ್ನ ಅವರು 2016ರಲ್ಲಿ ತವರಿನ ಹಾಕಿ ವಿಶ್ವಕಪ್ ಗೆದ್ದ ಭಾರತದ ಜೂನಿಯರ್ ಪುರುಷರ ತಂಡದ ಕೋಚ್ ಆಗಿದ್ದರು.
ಭಾರತ ಮಹಿಳಾ ಹಾಕಿ ತಂಡದ ಕಳೆದೊಂದು ವರ್ಷದ ನಿರ್ವಹಣೆ ನೀರಸವಾಗಿದ್ದು, ಪ್ರೊ ಲೀಗ್ನಲ್ಲಿ (FIH Pro League ) ಆಡಿದ 16 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದಿತ್ತು ಮತ್ತು ಮುಂದಿನ ಆವೃತ್ತಿಗೆ ಅರ್ಹತೆ ಪಡೆಯಲು ಕೂಡ ವಿಫಲವಾಗಿದೆ.