ಹಾಕಿ ವಿಶ್ವಕಪ್: ಇಂಗ್ಲೆಂಡ್ ಎದುರು ಮುಗ್ಗರಿಸಿದ ಭಾರತ
ಆಮ್ಸ್ಟೆಲ್ವೀನ್ (ನೆದರ್ಲ್ಯಾಂಡ್ಸ್): ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿದರೂ, ದ್ವಿತೀಯಾರ್ಧದಲ್ಲಿ 3 ಗೋಲುಗಳನ್ನು ಬಿಟ್ಟುಕೊಟ್ಟ ಭಾರತದ ಪುರುಷರ ತಂಡ ಎಫ್ಐಎಚ್ ಹಾಕಿ ವಿಶ್ವಕಪ್ ಟೂರ್ನಿಯ (
) ತನ್ನ 2ನೇ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 2-4 ಅಂತರದಿಂದ ಪರಾಭವಗೊಂಡಿತು. ಇದರಿಂದ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೆ ಮುನ್ನ ಆಘಾತ ಎದುರಿಸಿರುವ ಭಾರತ, ಹಾಕಿ ವಿಶ್ವ ಸಮರದಲ್ಲಿ ಆಂಗ್ಲರೆದುರು 32 ವರ್ಷಗಳಿಂದ ಗೆಲುವು ಕಾಣದ ಕೊರತೆಯನ್ನೂ ನೀಗಿಸಲು ವಿಫಲವಾಯಿತು.
ವ್ಯಾಗನರ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಡಿ ಗುಂಪಿನ ಪ್ರಮುಖ ಕಾದಾಟದಲ್ಲಿ ಭಾರತ ತಂಡ ಮೊದಲಾರ್ಧದಲ್ಲಿ 2-1ರಿಂದ ಮುನ್ನಡೆಯಲ್ಲಿತ್ತು. ನಿಕೋಲಸ್ ಬಂದುರಕ್ ಸಿಡಿಸಿದ ಗೋಲಿನಿಂದ ಇಂಗ್ಲೆಂಡ್ 14ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತು. ಆದರೆ 2ನೇ ಕ್ವಾರ್ಟರ್ನಲ್ಲಿ ನಾಯಕ ಹರ್ಮಾನ್ಪ್ರೀತ್ ಸಿಂಗ್ (17ನೇ ನಿಮಿಷ) ಮತ್ತು ದಿಲ್ಪ್ರೀತ್ ಸಿಂಗ್ (25) ಬಾರಿಸಿದ ಗೋಲಿನಿಂದ ಭಾರತ ಮುನ್ನಡೆ ಕಂಡಿತು.
ದ್ವಿತೀಯಾರ್ಧದಲ್ಲಿ ಸ್ಟುವರ್ಟ್ ರುಶ್ಮೀರ್ (39), ಹೆನ್ರಿ ಕ್ರಾಫ್ಟ್ (43) ಮತ್ತು ನಿಕೋಲಸ್ ಬಂದುರಕ್ (55) ಬಾರಿಸಿದ ಗೋಲಿನಿಂದ ಭಾರತ ಸೋಲು ಅನುಭವಿಸಿತು. ವಿಶ್ವ ನಂ. 3 ಇಂಗ್ಲೆಂಡ್ ಎದುರು ಭಾರತ ಆರಂಭಿಕ ಮೇಲುಗೈ ಸಾಧಿಸಿದರೂ, ಕೊನೇ ಕ್ಷಣದಲ್ಲಿ ಮುಗ್ಗರಿಸುವ ಚಾಳಿ ಮುಂದುವರಿಸಿತು.
ಭಾರತ ಕೊನೇ ಕ್ವಾರ್ಟರ್ನಲ್ಲಿ ತಿರುಗೇಟು ನೀಡುವ ತವಕದಲ್ಲಿದ್ದಾಗ ನೀಲಕಂಠ ಶರ್ಮ ಹಳದಿ ಕಾರ್ಡ್ ಪಡೆದರು. ಇದರಿಂದ ಭಾರತ 5 ನಿಮಿಷಗಳ ಕಾಲ 10 ಆಟಗಾರರೊಂದಿಗೆ ಆಡುವ ಹಿನ್ನಡೆ ಎದುರಿಸಿತು. ಇದರಿಂದಾಗಿ ಮೇಲುಗೈ ಉಳಿಸಿಕೊಂಡ ಇಂಗ್ಲೆಂಡ್ ಎಲ್ಲ 3 ಅಂಕಗಳನ್ನು ಬಾಚಿಕೊಂಡಿತು.
ವೇಲ್ಸ್ ಎದುರು 3-1ರಿಂದ ಗೆದ್ದು ಬೀಗಿದ್ದ ಭಾರತಕ್ಕೆ ಈ ಸೋಲು ಹಿನ್ನಡೆ ತಂದಿದೆ. ಭಾರತ ಹಾಕಿ ವಿಶ್ವಕಪ್ನಲ್ಲಿ 1994ರಲ್ಲಿ ಕೊನೆಯದಾಗಿ ಆಂಗ್ಲರೆದುರು ಗೆಲುವು ಕಂಡಿದೆ. ಈ ಮುನ್ನ 2002, 2006, 2010 ಹಾಗೂ 2014ರ ಆವೃತ್ತಿಯಲ್ಲೂ ಸೋತಿದ್ದರೆ, 2023ರಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಿತ್ತು.
ಪಾಕ್ ಎದುರು ಕನಿಷ್ಠ ಡ್ರಾ ಅಗತ್ಯ
ಆಡಿದ 2 ಪಂದ್ಯಗಳಿಂದ 3 ಅಂಕ ಗಳಿಸಿರುವ ಭಾರತ ತಂಡ ಟೂರ್ನಿಯ 2ನೇ ಸುತ್ತಿಗೇರಲು ಪಾಕಿಸ್ತಾನ ವಿರುದ್ಧದ ತನ್ನ ಮುಂದಿನ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಬೇಕಾಗಿದೆ. ಡಿ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ಸದ್ಯ 2ನೇ ಸ್ಥಾನದಲ್ಲಿದೆ. ಪಾಕ್ ವಿರುದ್ಧ ಸೋತರೆ ಭಾರತ ಪ್ರಶಸ್ತಿ ರೇಸ್ನಿಂದ ಹೊರಬೀಳಲಿದೆ. ಮೊದಲ ಪಂದ್ಯದಲ್ಲಿ ಆಂಗ್ಲರೆದುರು ಸೋತಿದ್ದ ಪಾಕ್, 2ನೇ ಪಂದ್ಯದಲ್ಲಿ ವೇಲ್ಸ್ ಎದುರು ಡ್ರಾಕ್ಕೆ ತೃಪ್ತಿಪಟ್ಟಿದೆ.