ನೇಷನ್ಸ್​ ಕಪ್​ ಹಾಕಿ: ಫೈನಲ್​ಗೇರಿದ ಭಾರತದ ಮಹಿಳೆಯರು 
ಹಾಕಿ

ನೇಷನ್ಸ್​ ಕಪ್​ ಹಾಕಿ: ಫೈನಲ್​ಗೇರಿದ ಭಾರತದ ಮಹಿಳೆಯರು

ಆಕ್ಲೆಂಡ್​: ನವನೀತ್​ ಕೌರ್​ (6, 13ನೇ ನಿಮಿಷ) ಮತ್ತು ದೀಪಿಕಾ ಸೆಹ್ರಾವತ್​ (14, 18) ಸಿಡಿಸಿದ ಅವಳಿ ಗೋಲುಗಳ ಬಲದಿಂದ ಭಾರತ ತಂಡ ಎಫ್​​ಐಎಚ್​ ಮಹಿಳಾ ಹಾಕಿ ನೇಷನ್ಸ್​ ಕಪ್ (FIH Hockey Women''s Nations Cup)​ ಟೂರ್ನಿಯ ಸೆಮಿಫೈನಲ್​ನಲ್ಲಿ ಚಿಲಿ ವಿರುದ್ಧ 6-0 ಅಂತರದಿಂದ ಗೆಲುವು ದಾಖಲಿಸಿದೆ. ಭಾರತ ತಂಡ ಭಾನುವಾರ ನಡೆಯಲಿರುವ ಫೈನಲ್​ನಲ್ಲಿ ಆತಿಥೇಯ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದೆ. ಪ್ರಶಸ್ತಿ ಗೆದ್ದ ತಂಡ ಮುಂದಿನ ವರ್ಷದ ಮಹಿಳಾ ಪ್ರೊ ಲೀಗ್​ಗೆ ಬಡ್ತಿ ಪಡೆಯಲಿದೆ.
ಶನಿವಾರ ನಡೆದ ಉಪಾಂತ್ಯದಲ್ಲಿ ನೇಹಾ (32) ಮತ್ತು ರುತುಜಾ ದಾದಾಸೋ ಪಿಸಲ್​ (39) ಭಾರತ ಪರ ತಲಾ ಒಂದು ಗೋಲು ದಾಖಲಿಸಿದರು. ಈ ಮೂಲಕ ಭಾರತ ಟೂರ್ನಿಯಲ್ಲಿ ಸತತ 4ನೇ ಗೆಲುವು ಕಂಡಿತು. ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಾಯಕಿ ಸಲಿಮಾ ಟೆಟೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ನ್ಯೂಜಿಲೆಂಡ್​ ಮತ್ತೊಂದು ಸೆಮಿಫೈನಲ್​ನಲ್ಲಿ ಅಮೆರಿಕ ವಿರುದ್ಧ ಪೆನಾಲ್ಟಿ ಶೂಟೌಟ್​ನಲ್ಲಿ 4-1ರಿಂದ ಗೆಲುವು ಸಾಧಿಸಿತು.